ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಬೈಂದೂರು ವಿಧಾನಸಭಾ ಕ್ಷೇತ್ರವನ್ನು ಮಾದರಿಯಾಗಿ ರೂಪಿಸುವಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಕೊಲ್ಲೂರಿನಲ್ಲಿಯೂ ಒಳಚರಂಡಿ, ಕುಡಿಯುವ ನೀರು, ರಿಂಗ್ ರೋಡ್ ಯೋಜನೆ ಪ್ರಗತಿಯಲ್ಲಿದೆ ಎಂದು ಸಂಸದ ಬಿ. ವೈ. ರಾಘವೇಂದ್ರ ಹೇಳಿದರು.
ಉಡುಪಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ನಿರ್ಮಿಸಲಾದ ಅಮ್ಮ ವಿಶ್ರಾಂತಿಗೃಹವನ್ನು ಬುಧವಾರ ಲೋಕಾರ್ಪಣೆಗೊಳಿಸಿ ಬಳಿಕ ಮಾತನಾಡಿ ಜಿ. ಶಂಕರ್ ಅವರು ನೂರಾರು ಸೇವಾ ಕಾರ್ಯಗಳನ್ನು ಕೈಗೊಂಡು ಜನರಿಗೆ ನೆರವಾಗುತ್ತಲೇ ಬಂದಿದ್ದಾರೆ. ಇದೀಗ ಅಮ್ಮ ವಿಶ್ರಾಂತಿಗೃಹ ನಿರ್ಮಿಸಿಕೊಡುವ ತಾಯಿಯ ಸೇವೆಗೈದಿದ್ದಾರೆ ಎಂದರು.
ಬಾಲ್ಯದಲ್ಲಿ ತಂದೆ ತಾಯಿಯೊಂದಿಗೆ ಕೊಲ್ಲೂರು ಕ್ಷೇತ್ರಕ್ಕೆ ಬರುತ್ತಿದ್ದೆ. ಇಂದು ಅದೇ ಕ್ಷೇತ್ರದಲ್ಲಿ ಸೇವೆ ಮಾಡುವ ಅವಕಾಶವನ್ನು ತಾಯಿ ಕರುಣಿಸಿದ್ದಾಳೆ ಎಂದ ಅವರು ಕೇಬಲ್ ಕಾರ್ ಯೋಜನೆಯನ್ನು ಜಾರಿಗೊಳಿಸಿ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೋಡಲಾಗುವುದು ಎಂದರು.
ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿ. ಎಂ. ಸುಕುಮಾರ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಎಷ್ಟೇ ದುಡಿದರೂ ಕೊನೆಯಲ್ಲಿ ಎಲ್ಲವನ್ನು ಬಿಟ್ಡು ಹೋಗಬೇಕಾಗುತ್ತೆ. ಇರುವಷ್ಟು ಕಾಲ ಸಮಾಜ ಸೇವೆಯಲ್ಲಿ ತೊಡಗಿಕೊಂಡರೆ ಬದುಕು ಸಾರ್ಥಕವಾಗುತ್ತದೆ ಎಂದರು.
ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್, ಎಸಿ ಕೆ. ರಾಜು, ಕೊಲ್ಲೂರು, ಕೊಲ್ಲೂರು ಗ್ರಾ.ಪಂ. ಅಧ್ಯಕ್ಷರಾದ ಶಿವರಾಮಕೃಷ್ಣ ಭಟ್, ಜಿ.ಪಂ. ಸದಸ್ಯರಾದ ಶಂಕರ ಪೂಜಾರಿ, ಶ್ರೀ ಮೂಕಾಂಬಿಕಾ ದೇವಳದ ಆಡಳಿತಾಧಿಕಾರಿ ಎಸ್.ಪಿ.ಬಿ ಮಹೇಶ್, ಅರ್ಚಕರಾದ ರಾಮಚಂದ್ರ ಅಡಿಗ ಉಪಸ್ಥಿತರಿದ್ದರು.
ಅಮ್ಮ ವಿಶ್ರಾಂತಿಗೃಹದ ಬೀಗದ ಕೀಲಿಯನ್ನು ಜಿಲ್ಲಾಧಿಕಾರಿ ಮೂಲಕವಾಗಿ ಸಹಾಯಕ ಆಯುಕ್ತ ಕೆ. ರಾಜು ಅವರಿಗೆ ಹಸ್ತಾಂತರಿಸಲಾಯಿತು.
ನಾಡೋಜ ಜಿ. ಶಂಕರ್ ಪ್ರಸ್ತಾಪಿಸಿ ಸ್ವಾಗತಿಸಿದರು. ಶಿಕ್ಷಕ ಅಶೋಕ್ ತೆಕ್ಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಶಿವರಾಮ್ ಕೆ. ಎಂ ವಂದಿಸಿದರು.