ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಹನ್ನೊಂದು ವರ್ಷಗಳ ಹಿಂದೆ ಬೈಂದೂರಿನಲ್ಲಿ ಜನ್ಮ ತಾಳಿದ ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋಪರೇಟಿವ್ ಬೈಂದೂರು ಪ್ರಧಾನ ಕಚೇರಿ ಮತ್ತು ವಿವಿಧ ಶಾಖೆಗಳ ಮೂಲಕ ತಾಲ್ಲೂಕು ವ್ಯಾಪ್ತಿಗೆ ತನ್ನ ಸೇವೆ ವಿಸ್ತರಿಸಿಕೊಂಡಿದೆ. ಇದಕ್ಕೆ ಅದರ ಸದಸ್ಯರು ಮತ್ತು ಗ್ರಾಹಕರು ಇರಿಸಿದ ವಿಶ್ವಾಸ ಮತ್ತು ನೀಡಿದ ಬೆಂಬಲ ಕಾರಣ ಎಂದು ಸಂಸ್ಥೆಯ ಅಧ್ಯಕ್ಷ ಎಸ್. ರಾಜು ಪೂಜಾರಿ ಹೇಳಿದರು.
ಅವರು ನಾವುಂದದಲ್ಲಿ ನಡೆದ ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋಪರೇಟಿವ್‌ನ ನಾವುಂದ ಶಾಖೆಯ ಗ್ರಾಹಕರ ಸಮಾವೇಶದಲ್ಲಿ ಎಸ್. ರಾಜು ಪೂಜಾರಿ ಮಾತನಾಡಿದರು.
ಮೂರು ವರ್ಷಗಳ ಹಿಂದೆ ಆರಂಭವಾದ ನಾವುಂದ ಶಾಖೆ ರೂ 3 ಕೋಟಿ ಠೇವಣಿ ಸಂಗ್ರಹಿಸಿ, ರೂ 3.5 ಕೋಟಿ ಸಾಲ ನೀಡಿದೆ. ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರ ಆರ್ಥಿಕ ಉನ್ನತಿಗೆ ಶ್ರಮಿಸುತ್ತಿದೆ. ಅಗತ್ಯ ಇರುವವರಿಗೆ ಕ್ಷಿಪ್ರ ಸಾಲ ನೀಡಲಾಗುತ್ತಿದೆ. ಗ್ರಾಹಕ ಸೇವೆಗೆ ಆದ್ಯತೆ ನೀಡುತ್ತಿರುವುದರಿಂದ ಅವರ ಒಲವು ಗಳಿಸಿದೆ. ಇವೆಲ್ಲ ಕಾರಣಗಳಿಂದ ಸಂಸ್ಥೆ ಏರುಗತಿಯ ಬೆಳವಣಿಗೆ ಸಾಧಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ಮರವಂತೆ ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಸನ್ಮಾನ್ ಶೆಟ್ಟಿ ಹಾಗೂ ಬೈಂದೂರು ಪೋಲಿಸ್ ಠಾಣಾಧಿಕಾರಿ ಸಂಗೀತ ಇವರನ್ನು ಸನ್ಮಾನಿಸಲಾಯಿತು.
ಹಿರಿಯ ಗ್ರಾಹಕ ಎಸ್. ಜನಾರ್ದನ ಮರವಂತೆ ಸಂಸ್ಥೆಗೆ ಶುಭ ಹಾರೈಸಿದರು. ಉಪಾಧ್ಯಕ್ಷ ಎಂ. ವಿನಾಯಕ ರಾವ್ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಿಟ್ಟಣ್ಣ ರೈ ವಂದಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ನಿರೂಪಿಸಿದರು.
ಸಂಸ್ಥೆಯ ಸದಸ್ಯರಾಗಿರುವ ನಾವುಂದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಾನಕಿ, ಸದಸ್ಯೆ ಸಿಂಗಾರಿ, ಕಾಲ್ತೋಡು ಗ್ರಾಮ ಪಂಚಾಯಿತಿ ಸದಸ್ಯ ಕಿರಣ್ ಶೆಟ್ಟಿ, ಮರವಂತೆ ಸದಸ್ಯ ಎಂ. ವಿನಾಯಕ ರಾವ್ ಅವರನ್ನು ಅಭಿನಂದಿಸಲಾಯಿತು.

















