ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಎಲ್ಲರೂ ಪ್ರೀತಿಯಿಂದ ಮೂಕಜ್ಜಿ ಎಂದು ಕರೆಯುವ ಉಳ್ಳೂರು ಮೂಕಾಂಬಿಕಾ ಐತಾಳ್ ಕುಂದಗನ್ನಡದಲ್ಲಿ ಆಶು ಸಾಹಿತ್ಯ ರಚಿಸಿದ ಮೊದಲಿಗರು. ಅವರ ಕವನ ಮತ್ತು ಕತೆಗಳಲ್ಲಿ ಕುಂದಗನ್ನಡದ ಪದಗಳು, ನುಡಿಗಟ್ಟುಗಳು ಸಮೃದ್ಧವಾಗಿವೆ ಎಂದು ಸಾಹಿತಿ ಎ. ಎಸ್. ಎನ್. ಹೆಬ್ಬಾರ್ ಹೇಳಿದರು.
ನಾಗೂರಿನಲ್ಲಿ ಖ್ಯಾತ ಆಶು ಕವಯತ್ರಿ ಉಳ್ಳೂರು ಮೂಕಾಂಬಿಕಾ ಐತಾಳ್ ಅವರ ಬದುಕು ಮತ್ತು ಸಮಗ್ರ ಸಾಹಿತ್ಯ ಕುರಿತ ಸುಬ್ರಹ್ಮಣ್ಯ ಐತಾಳ್ ಅವರ ಕೃತಿ ‘ಮೂಕಜ್ಜಿ’ ಅನಾವರಣಗೊಳಿಸಿ ಮಾತನಾಡಿದರು.
ಯಾವುದೇ ಸಾಂಪ್ರದಾಯಿಕ ಶಿಕ್ಷಣ ವಿಲ್ಲದೆ, ಬಾಲ ವಿಧವೆಯಾಗಿ ಸಂಪ್ರದಾ ಯದ ಕಟ್ಟುಪಾಡುಗಳಿಗೆ ಒಳಗಾಗಿ ಬಾಹ್ಯ ಪ್ರಪಂಚದೊಂದಿಗೆ ಅಷ್ಟಾಗಿ ಬೆರೆಯದೆ ಬೆಳೆದ ಮೂಕಾಂಬಿಕಾ ಅಮ್ಮ ವಿವಿಧ ಛಂದಸ್ಸು ಗಳಲ್ಲಿ, ವೈವಿಧ್ಯಮಯ ವಿಚಾರಗಳ ಮೇಲೆ ಕವನ ರಚಿಸಿದುದು. ಕತೆಗಳನ್ನು ಕಟ್ಟಿರುವುದು ಅಚ್ಚರಿಯ ವಿಷಯ. ಅವರ ಹಲವು ಕೃತಿಗಳು ಬೆಳಕಿಗೆ ಬಂದಿಲ್ಲ. ಅವರ ಅಳಿದುಳಿದ ಕೃತಿಗಳನ್ನು ದಾಖಲಿಸುವ ಮಹತ್ವದ ಕೆಲಸ’ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆ ವಹಿಸಿದ್ದರು. ಮೂಕಜ್ಜಿ ಕೃತಿಗಳ ವಿಮರ್ಶೆ ಮಾಡಿದ ನಿವೃತ್ತ ಪ್ರಾಧ್ಯಾಪಕಿ, ಹಿರಿಯ ಲೇಖಕಿ ಡಾ. ಪಾರ್ವತಿ ಜಿ. ಐತಾಳ್ ಕುರಿತ ಮೂಕಜ್ಜಿ ತಮ್ಮ ಕಾಲದ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ವಿಚಾರಗಳ ಕುರಿತು ಮಹತ್ವದ ಕೃತಿ ರಚಿಸಿದ್ದರೂ, ಕನ್ನಡದ ಮಹಿಳಾ ಸಾಹಿತಿಗಳ ಸಾಲಿನಲ್ಲಿ ಪರಿಗಣನೆಗೆ ಬಾರದಿರುವುದು ಬೇಸರದ ವಿಚಾರ ಎಂದರು.
ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಮರವಂತೆ ಪುಸ್ತಕ ಕುರಿತು ಮಾತನಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆ ವಹಿಸಿದ್ದರು.
ಸುಬ್ರಹ್ಮಣ್ಯ ಐತಾಳ್ ಸ್ವಾಗತಿಸಿದರು. ಅಶ್ವಿನಿ ಐತಾಳ್ ನಿರೂಪಿಸಿ, ವಂದಿಸಿದರು. ಅಶ್ವಿನಿ ಐತಾಳ್ ಮತ್ತು ರಾಕೇಶ್ ಹೊಸಬೆಟ್ಟು ಮೂಕಜ್ಜಿ ಹಾಡು ಪ್ರಸ್ತುತ ಪಡಿಸಿದರು.