ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರಾಜ್ಯ ವಿಜ್ಞಾನ ಪರಿಷತ್ ಆಶ್ರಯದಲ್ಲಿ ನಡೆದ ಅಖಿಲ ಕರ್ನಾಟಕ ವಿಜ್ಞಾನ ಸಮಾವೇಶ- 2021 ದಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಮರವಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಗ್ರಾಮೀಣ ಕಿರಿಯರ ವಿಭಾಗದಲ್ಲಿ ಮಂಡಿಸಿದ ‘ಸುಸ್ಥಿರ ಜೀವನಕ್ಕೆ ಯೋಗ್ಯ ತಂತ್ರಜ್ಞಾನ’ ಎಂಬ ಪ್ರಬಂಧವು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ.
ಮುಖ್ಯ ಶಿಕ್ಷಕ ಸತ್ಯನಾ ಕೊಡೇರಿ, ವಿಜ್ಞಾನ ಶಿಕ್ಷಕಿ ಚೈತ್ರಾ ಶೆಟ್ಟಿ, ನಿರ್ಮಲಾ ಪೂಜಾರಿ ಮಾರ್ಗದರ್ಶನದಲ್ಲಿ ಶಿವಾನಿ ಪ್ರಭಾಕರ ಪೂಜಾರಿ ಮತ್ತು ಅಪೇಕ್ಷಾ ಸ್ಥಳೀಯ ಗುಡಿ ಕೈಗಾರಿಕೆಯಲ್ಲಿ ಕರಕುಶಲ ವಸ್ತುಗಳ ತಯಾರಿಕೆ ಕುರಿತು ಕ್ಷೇತ್ರ ಅಧ್ಯಯನ ನಡೆಸಿ ಜಿಲ್ಲಾ ಮಟ್ಟದಲ್ಲಿ ಪ್ರಬಂಧವನ್ನು ಮಂಡಿಸಿದ್ದರು.
ವಿದ್ಯಾರ್ಥಿಗಳು ಅಧ್ಯಯನಕ್ಕೆ ಕುಂಭಾಶಿ ಗ್ರಾಮದ ಕೊರಗ ಸಮುದಾಯದ ಕುಲಕಸುಬಾದ ಬುಟ್ಟಿ ಹೆಣೆಗೆಯುವುದನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಕ್ಷೇತ್ರ ಅಧ್ಯಯನದ ವೇಳೆ ಈ ಕುಲಕಸುಬು ಅವನತಿಯತ್ತ ಸಾಗುತ್ತಿರುವುದನ್ನು ಗುರುತಿಸಿದ್ದರು.
ಬೆತ್ತ, ಬಿದಿರು, ಬಿಳುಲುನಂತಹ ಕಚ್ಚಾ ಸಾಮಗ್ರಿಗಳ ಕೊರತೆ, ಪ್ಲಾಸ್ಟಿಕ್ ಮತ್ತು ರಬ್ಬರ್ ಬುಟ್ಟಿಗಳ ಬಳಕೆ ಹೆಚ್ಚಳ, ಮಾರಾಟ ಸೌಲಭ್ಯ ಮತ್ತು ಸರ್ಕಾರದ ಬೆಂಬಲದ ಕೊರತೆ, ದೊಡ್ಡ ಕೈಗಾರಿಕೆಗಳ ಉತ್ಪನ್ನಗಳ ಪೈಪೋಟಿ, ದುಡಿಮೆಗೆ ತಕ್ಕ ಆದಾಯ ಸಿಗದಿರುವುದು, ಸೂಕ್ತ ಯಂತ್ರೋಪಕರಣಗಳ ಕೊರತೆ, ಕೃಷಿಯಲ್ಲಿ ಸಾಂಪ್ರದಾಯಿಕ ಸಾಮಗ್ರಿಗಳ ಬಳಕೆ ಕುಸಿತ, ಕುಲಕಸುಬಿನಿಂದ ಸಮುದಾಯದ ವಿದ್ಯಾವಂತರು ವಿಮುಖರಾಗಿರುವುದು ಕಾರಣ ಎಂಬ ಅಂಶಗಳನ್ನು ಉಲ್ಲೇಖಿಸಿದ್ದಾರೆ.