ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ಸ್ನಾತಕೋತ್ತರ ವಿಭಾಗದಿಂದ ಸಂಶೋಧನ ವಿಧಾನದ ಕುರಿತು ಒಂದು ದಿನದ ಕಾರ‍್ಯಗಾರವನ್ನು ಆಯೋಜಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ| ಕುರಿಯನ್ ವಿದ್ಯಾರ್ಥಿಗಳಿಗೆ ಸಂಶೋಧನ ವಿನ್ಯಾಸ ಹಾಗೂ ವಿಧಾನಗಳ ಕುರಿತು ಮಾಹಿತಿ ನೀಡಿದರು.
“ಜ್ಞಾನದ ಸೃಷ್ಠಿ ಸಂಶೋಧನೆಯಿಂದ ಮಾತ್ರ ಸಾಧ್ಯ. ಸಂಶೋಧನೆಯಲ್ಲಿ ಯಾವುದೇ ವಿಷಯದ ಕುರಿತು ಸಂಶೋಧಕನ ಜ್ಞಾನ ಹಾಗೂ ಆಸಕ್ತಿ ತುಂಬಾ ಮುಖ್ಯವಾಗುತ್ತವೆ. ಒಬ್ಬ ಸಂಶೋಧಕ ಜ್ಞಾನದ ಮೂಲಕ ಎಲ್ಲರಿಗೂ ದಾರಿ ತೋರಿಸುವವನಾಗಿರುತ್ತಾನೆ. ಅದಕ್ಕಾಗಿ ವಿಶ್ವಾಸಾರ್ಹತೆ ಕೂಡ ಪ್ರಮುಖ ಪಾತ್ರ ವಹಿಸುತ್ತದೆ” ಎಂದರು. ಸಂಶೋಧನೆ ಮಾಡಲು ವಿಷಯಗಳನ್ನು ಆಯ್ಕೆ ಮಾಡುವುದರ ಕುರಿತು ಹೇಳಿದ ಡಾ| ಕುರಿಯನ್, ಸ್ಪಷ್ಟವಾಗಿ ಯೋಚನೆ ಮಾಡಲು ಪ್ರಾರಂಭಿಸಿದಾಗ ಮಾತ್ರ ಸಂಶೋಧನೆ ಮಾಡಲು ಸಾಧ್ಯ ಎಂದು ಹೇಳಿದರು.
ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿಗಳ ಸಂಶೋಧನಾ ವಿಷಯಗಳ ಕುರಿತು ಚರ್ಚಿಸಲಾಯಿತು. ಕಾರ್ಯಾಗಾರದಲ್ಲಿ ವಿಭಾಗದ ಸಂಯೋಜಕರಾದ ಪ್ರಸಾದ್ ಶೆಟ್ಟಿ, ಬಿಎಸ್‌ಡಬ್ಲ್ಯೂ ವಿಭಾಗದ ಉಪನ್ಯಾಸಕರಾದ ಡಾ ಸ್ವಪ್ನ ಆಳ್ವ, ಪವಿತ್ರ ಮತ್ತು ಸುಧೀಂದ್ರ ಶಾಂತಿ, ಬಿ.ಪಿಎಡ್ ವಿಭಾಗದ ಉಪನ್ಯಾಸಕ ಆನಂದ ವಲು ಉಪಸ್ಥಿತರಿದ್ದರು. ಪತ್ರಿಕೋದ್ಯಮ ವಿಭಾಗದ ಇತರ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಕಾರ್ಯಾಗಾರದ ಪ್ರಯೋಜನವನ್ನು ಪಡೆದರು. ಡಾ ಶ್ರೀನಿವಾಸ ಹೊಡೆಯಾಲ ವಂದಿಸಿದರು.