ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಲಸಿಕೆಯಿಂದ ಮಾತ್ರ ಕೊರೊನಾ ಮಣಿಸಲು ಸಾಧ್ಯವಾಗುವುದರಿಂದ ಎಲ್ಲರೂ ತಮ್ಮ ಸರತಿ ಬಂದಾಗ ತಪ್ಪದೆ ಲಸಿಕೆ ತೆಗೆದುಕೊಳ್ಳಬೇಕು ಎಂದು ಮರವಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸನ್ಮಾನ್ ಶೆಟ್ಟಿ ಹೇಳಿದರು.
ಮರವಂತೆ ಗ್ರಾಮ ಪಂಚಾಯಿತಿಯಲ್ಲಿ ನಡೆದ ಶೇ 25 ಮೀಸಲು ನಿಧಿಯ ಸೌಲಭ್ಯ ವಿತರಣೆ ಮತ್ತು ಆರೋಗ್ಯ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ಎರಡನೆ ಬಾರಿ ಕಾಣಿಸಿಕೊಂಡಿರುವುದರಿಂದ ಎಲ್ಲರೂ ಸರ್ಕಾರ ವಿಧಿಸಿದ ನಿರ್ಬಂಧಗಳನ್ನು ತಪ್ಪದೆ ಪಾಲಿಸಬೇಕು. ಲಸಿಕೆ ಪಡೆದವರು ಸಂಪೂರ್ಣ ಸುರಕ್ಷತಾ ಭಾವ ತಾಳಬಾರದು. ಎಲ್ಲರಂತೆ ಅವರೂ ಕೊರೊನಾ ವಿರುದ್ಧ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದರು.
ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ ಅಧ್ಯಕ್ಷತೆ ವಹಿಸಿದ್ದರು. ರೂ ೫ಲಕ್ಷಕ್ಕಿಂತ ಅಧಿಕ ಮೀಸಲು ನಿಧಿಯಿಂದ ಆಯ್ದ ಅರ್ಹ ಫಲಾನುಭವಿಗಳಿಗೆ ಲ್ಯಾಪ್‌ಟಾಪ್, ಶೈಕ್ಷಣಿಕ ಪ್ರೋತ್ಸಾಹಧನ, ವೈದ್ಯಕೀಯ ವೆಚ್ಚ, ಹೊಲಿಗೆ ಯಂತ್ರ. ಗಾಲಿಕುರ್ಚಿ, ಕ್ರೀಡಾ ಉಪಕರಣ, ಕುಲಕಸುಬು ಬೆಂಬಲ ಸಹಾಯಧನ, ಮೂಲಭೂತ ಸೌಲಭ್ಯ ವಿತರಿಸಲಾಯಿತು.
ಉಪಾಧ್ಯಕ್ಷ ಲೋಕೇಶ ಖಾರ್ವಿ, ಸದಸ್ಯರು ಇದ್ದರು. ಅಭಿವೃದ್ಧಿ ಅಧಿಕಾರಿ ರಿಯಾಜ್ ಅಹಮದ್ ಸ್ವಾಗತಿಸಿದರು. ಕಾರ್ಯದರ್ಶಿ ದಿನೇಶ್ ಶೇರುಗಾರ್ ವಂದಿಸಿದರು. ಕರ ಸಂಗ್ರಾಹಕ ಶೇಖರ ಮರವಂತೆ ನಿರೂಪಿಸಿದರು.