ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರಂಗಭೂಮಿ ಬದುಕಿನ ನೋವು-ನಲಿವನ್ನು ವಾಸ್ತವದ ನೆಲೆಯಲ್ಲಿ ಧ್ವನಿಸುವ ಪ್ರಕ್ರಿಯೆ ಆಗಿರುವುದರಿಂದ ಅದು ಪರಿಣಾಮಕಾರಿಯಾಗಿ ಪ್ರೇಕ್ಷಕರನ್ನು ತಲುಪುತ್ತದೆ ಎಂದು ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ರಘು ನಾಯ್ಕ್ ಹೇಳಿದರು.
ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಹಾಗೂ ಲಾವಣ್ಯ ರಿ. ಬೈಂದೂರು ಸಹಯೋಗದೊಂದಿಗೆ ಮಯ್ಯಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾದ ವಿಶ್ವ ರಂಗಭೂಮಿ ದಿನಾಚರಣೆ 2021ರ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ ರಂಗಭೂಮಿ ಕಟ್ಟುವ ಪ್ರಕ್ರಿಯೆಯಲ್ಲಿ ಸಂಘಟನೆ, ನಾಟಕದ ಎಲ್ಲಾ ವಿಭಾಗ, ನಟರು ಹಾಗೂ ಪ್ರೇಕ್ಷಕರು ಪ್ರಮುಖರಾಗುತ್ತಾರೆ. ಹಾಗಾಗಿಯೇ ರಂಗಭೂಮಿ ಇಂದಿಗೂ ಮಹತ್ವ ಪಡೆದುಕೊಂಡಿದೆ ಎಂದರು.
ಜಿಲ್ಲಾ ಪಂಚಾಯತ್ ಸದಸ್ಯ ಶಂಕರ ಪೂಜಾರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಲಾವಣ್ಯ ಅಧ್ಯಕ್ಷ ಎಚ್. ಉದಯ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯತ್ ಉಪಾಧ್ಯಕ್ಷೆ ಮಾಲಿನಿ ಕೆ, ಮಯ್ಯಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಹಿರಿಯ ಪ್ರಾಥಮಕ ಶಾಲೆಯ ಮುಖ್ಯೋಪಾಧ್ಯಾಯ ರಾಜು ಎಸ್. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ರಂಗಕರ್ಮಿಗಳಾದ ಕೊ. ಶಿನಾನಂದ ಕಾರಂತ್ ಹಾಗೂ ಸತ್ಯನಾ ಕೊಡೇರಿ ಅವರನ್ನು ಸನ್ಮಾನಿಸಲಾಯಿತು. ಲಾವಣ್ಯ ಉಪಾಧ್ಯಕ್ಷ ನರಸಿಂಹ ನಾಯಕ್ ಸ್ವಾಗತಿಸಿದರು. ಸದಸ್ಯರಾದ ಸುಬ್ರಹ್ಮಣ್ಯ ಜಿ. ಉಪ್ಪುಂದ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಲಾವಣ್ಯ ಕಲಾವಿದರಿಂದ ‘ರಂಗ ಗೀತೆಗಳು’ ಬಳಿಕ ಹಾಸ್ಯಮಯ ನಾಟಕ ‘ಕುಷ್ಣ ಸಂಧಾನ’ ಪ್ರದರ್ಶನಗೊಂಡಿತು.