ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರಂಗಭೂಮಿ ಕಲಾವಿದೆ, ಲೇಖಕಿ ವಿನುತಾ ವಿಶ್ವನಾಥ್ ಅವರ ‘ಹುಣ್ಸ್‌ಮಕ್ಕಿ ಹುಳ’ ಪುಸ್ತಕ ಬೆಂಗಳೂರಿನ ಫಿಡಿಲೆಟಸ್ ಗ್ಯಾಲರಿಯಲ್ಲಿ ಬಿಡುಗಡೆಗೊಂಡಿತು.
ಹೂವಿನಹೊಳೆ ಪ್ರತಿಷ್ಠಾನ ಬೆಂಗಳೂರು, ಫಿಡಿಲಿಟಸ್ ಗ್ಯಾಲರಿ, ಶಿಲ್ಪ ಫೌಂಡೇಶನ್, ಸುದಯ ಟ್ರಸ್ಟ್ ಬೆಂಗಳೂರು ಸಹಕಾರದೊಂದಿಗೆ ಭಾನುವಾರ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಈ ಪುಸ್ತಕ ಬಿಡುಗಡೆಗೊಂಡಿತು.
ಲೇಖಕ, ಪತ್ರಕರ್ತ ಜೋಗಿ ಅವರು ಕಾರ್ಯಕ್ರಮದಲ್ಲಿ ಮಾತನಾಡಿ ಒಂದು ದಿನದಲ್ಲಿ ಎರಡು ಬಾರಿ ಓದಿದ್ದೇನೆ. ಮೊದಲ ಬಾರಿ ಓದಿದಾಗ ಕಣ್ಣಂಚಲಿ ನೀರು ತುಂಬಿಕೊಂಡಿತ್ತು. ಎರಡನೇ ಬಾರಿ ಓದಿದಾಗ ಸಮಾಜದಲ್ಲಿ ವೃತ್ತಿ, ನೆಚ್ಚಿದ ಪ್ರೀತಿ, ಹಳ್ಳಿಯಿಂದ ನಗರಕ್ಕೆ ಬಂದಾಗ ಎದುರಾದ ಸಮಸ್ಯೆ, ನೋವು ಅಪಮಾನ ಇದನ್ನೆಲ್ಲೆ ಹೆದರಿಸಿ ಗೆಲ್ಲುತ್ತಿರುವ ದಿಟ್ಟ ಮಹಿಳೆಯನ್ನು ನೋಡಿದಂತಾಯಿತು ಎಂದರು.
ಚಿತ್ರನಟ, ನಿರ್ದೇಶಕ ಸುಚೇಂದ್ರ ಪ್ರಸಾದ್ ಮಾತನಾಡಿ ಲೇಖಕಿಯ ಮೊದಲ ಪುಸ್ತಕವಿದು.. ಮುಂದೆ ಹೆಚ್ಚು ಹೆಚ್ಚು ಬರೆದು ಕನ್ನಡಕ್ಕೆ ಇನ್ನಷ್ಟು ಸೇವೆ ಮಾಡಲಿ. ಸೋದರಿ ಸುಮನ್ ಕಿತ್ತೂರು ಅವರು ಬೆನ್ನುಡಿ ಬರೆದುಕೊಟ್ಟಿದ್ದಾರೆ ತುಂಬಾ ಅರ್ಥಪೂರ್ಣವಾಗಿದೆ. ಅದನ್ನ ಓದಿದರೆ ಯಾರೇ ಆಗಲಿ ಒಳಗಿನ ಪುಟಗಳನ್ನು ಓದದೆ ಇರಲಾರರು ಎಂದರು.
ಗಾಯಕಿ ಅರ್ಚನಾ ಉಡುಪ ಮಾತನಾಡಿ ತಮ್ಮ ವೃತ್ತಿ ಜೀವನದಲ್ಲಿ ಯಶಸ್ಸಿನಲ್ಲಿರುವಾಗ ನಿರಂತರವಾಗಿ ಹಾಡಿ ಹಾಡಿ ಒಂದು ವರ್ಷ ಧ್ವನಿ ನಿಂತೋಗಿತ್ತು ಆಗ ಸಮಾಜ ನನ್ನ ಪ್ರತಿಭೆ ಬಗ್ಗೆ ಏನೇನೊ ಗಾಸಿಪ್ ಗಳು ಮಾತನಾಡಿದರು ಆಗ ಮನಸ್ಸಿಗೆ ತುಂಬಾ ನೋವಾಗಿತ್ತು.. ಆ ಒಂದು ವರ್ಷ ಅನುಭವಿಸಿದ ನೋವನ್ನು ಈ ಹುಡುಗಿ ಎಷ್ಟೋ ವರ್ಷಗಳಿಂದ ಅನುಭವಿಸಿಕೊಂಡು ಬಂದಿದ್ದಾಳೆ. ಗಟ್ಚಿಗಿತ್ತಿ ದೇವರು ಈಕೆಗೆ ಸಾಧಿಸಲು ಇನ್ನಷ್ಟು ಧೈರ್ಸ ಕೊಡಲಿ ಎಂದರು.
ಚಿತ್ರನಟಿ ಸಮನ್ ನಗರ್ಕರ್ ಮಾತನಾಡಿ ಬರವಣಿಗೆ ಅಷ್ಟು ಸುಲಭವಾಗಿ ಎಲ್ಲರಿಗೂ ಒಲಿಯಲ್ಲ.. ಮನಸ್ಸಿನ ಮಾತನ್ನ ದಾಖಲಿಸೋದು ತುಂಬಾ ಕಷ್ಟ. ಪುಸ್ತಕವನ್ನು ಕೈಯಲ್ಲಿ ಹಿಡಿದು ಓದುವುದು ಕೊಡುವಷ್ಚು ಖುಷಿ.. ಮೊಬೈಲ್ನಲ್ಲಿ ಓದುವುದು ಕೊಡಲ್ಲ.. ನಾವು ಹೆಚ್ಚೆಚ್ಚು ಓದಬೇಕು. ನಾವು ಮಾಡಿದ ಸಾಧನೆಯನ್ನು ಹೇಳಿಕೊಳ್ಳುವುದು ಸುಲಭ.. ಮನಸ್ಸಿನ ನೋವನ್ನ ಸಮಾಜದ ಎದುರು ಹೇಳಿಕೊಳ್ಳೋದು ಕಷ್ಟ ಅದನ್ನ ಲೇಖಕಿ ವಿನುತಾ ಅವರು ಪ್ರಾಮಾಣಿಕವಾಗಿ ಹೇಳಿಕೊಂಡಿದ್ದಾರೆ.
ನಟ ಶೈನ್ ಶೆಟ್ಟಿ, ಹಿರಿಯ ಲೇಖಕಿ ಗೀತಾ ಬಿ.ಯು, ಫಿಡಿಲಿಟಸ್ ಕಾರ್ಪ್ ಎಂಡಿ ಅಚ್ಚುತ್ ಗೌಡ, ಮೀಡಿಯಾ ಕನೆಕ್ಟ್ ದಿವ್ಯ ರಂಗೇನಹಳ್ಳಿ, ರೇಡಿಯೋ ಸಿಟಿ ಆರ್ಜೆ ಸೌಜನ್ಯ, ನಂದಿ ಹೂವಿನಹೊಳೆ, ಚೇತನ್ ಮಂಜುನಾಥ್ ಮೊದಲಾದವರು ವೇದಿಕೆಯಲ್ಲಿದ್ದರು.