ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಗಂಗೊಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ 70 ಅಧಿಕ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಮಾಜಿ ಶಾಸಕ ಗೋಪಾಲ ಪೂಜಾರಿ ಅವರ ಕಟ್‌ಬೆಲ್ತೂರಿನ ನಿವಾಸದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಬಿಜೆಪಿ ಮುಖಂಡರ ಏಕಪಕ್ಷೀಯ ನಿಲುವುಗಳಿಂದ ಬೇಸತ್ತು ಪಕ್ಷ ತೊರೆಯುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ.
ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು ಹಾಗೂ ತ್ರಾಸಿ ಜಿಲ್ಲಾ ಪಂಚಾಯತ್ ಉಸ್ತುವಾರಿ ಶರತ್ ಕುಮಾರ್ ಶೆಟ್ಟಿ ಪಕ್ಷದ ಬಾವುಟ ನೀಡುವುದರ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡರು.
ಈ ಸಂದರ್ಭ ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು ಮಾತನಾಡಿ, ಗೋಪಾಲ ಪೂಜಾರಿಯವರು ಈ ಹಿಂದೆ ಮಾಡಿರುವ ಜನಪರ ಕೆಲಸ ಹಾಗೂ ಅವರ ನಾಯಕತ್ವವನ್ನು ಒಪ್ಪಿಕೊಂಡು ಗಂಗೊಳ್ಳಿಯ ಯುವಕರು ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಹಿಂದೂತ್ವ ಹಾಗೂ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಈ ಭಾಗದ ಶಾಸಕರು ಗಂಗೊಳ್ಳಿಯ ಯುವಕರನ್ನು ಚುನಾವಣೆಗೆ ಬಳಸಿಕೊಂಡಿದ್ದು ಬಿಟ್ಟರೆ ಮತ್ತೇನೂ ಉಪಕಾರ ಮಾಡಿಲ್ಲ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಯುವಕರು ಸೇರ್ಪಡೆಯಾಗುತ್ತಿರುವುದು ಬಿಜೆಪಿ ಆಡಳಿತದಿಂದ ಜನ ರೋಸಿ ಹೋಗಿರುವುದು ತಿಳಿಯುತ್ತದೆ ಎಂದರು.
ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಂಜುಳಾ ದೇವಾಡಿಗ, ಗಂಗೊಳ್ಳಿ ಯೂತ್ ಕಾಂಗ್ರೆಸ್ನ ಪ್ರದೀಪ್ ಗಂಗೊಳ್ಳಿ, ಪಂಚಾಯತ್ ಸದಸ್ಯರಾದ ದೇವೇಂದ್ರ ಖಾರ್ವಿ ಗಂಗೊಳ್ಳಿ ಗ್ರಾಮೀಣ ಕಾಂಗ್ರೆಸ್ ಉಪಾಧ್ಯಕ್ಷ ಝಾಹೀರ್ ಇದ್ದರು