ಕುಂದಾಪುರ: ಯಾವುದೇ ಪ್ರಾಣಿಗಳು ಕೂಡಿಡುವ ಪ್ರಯತ್ನ ಮಾಡುವುದಿಲ್ಲ. ಮಾನವ ತನ್ನ ಮುಂದಾಲೋಚನೆಯಿಂದ ಕೂಡಿಡುವ ಪ್ರಯತ್ನ ಮಾಡುತ್ತಾ ಪ್ರಕೃತಿಯನ್ನು ಶೋಷಿಸುತ್ತಿದ್ದಾನೆ. ಪರಿಸರಕ್ಕೆ ನಾವು ಅನಿವಾರ್ಯವಲ್ಲ ಆದರೆ ನಮಗೆ ಪರಿಸರ ಅನಿವಾರ್ಯ ಎಂಬ ವಿವೇಚನೆಯನ್ನು ಬೆಳಸಿಕೊಳ್ಳ ಬೇಕು. ಪರಿಸರವನ್ನು ಸಂರಕ್ಷಿಸಿದರೇ ಮಾತ್ರ ಮನುಕುಲದ ಉಳಿವು ಎಂಬ ಅರಿವನ್ನು ಹೊಂದಿ ಕಾರ್ಯನಿರ್ವಹಿಸ ಬೇಕಿದೆ ಎಂದು ಕುಂದಾಪುರದ ವಲಯ ಅರಣ್ಯ ಸಂರಕ್ಷಣಾಧಿಕಾರಿ ಲೋಹಿತ್ ಕುಮಾರ್ ಹೇಳಿದರು.
ಅವರು ರೋಟರಿ ಕ್ಲಬ್ ಕುಂದಾಪುರದ ಆಶ್ರಯದಲ್ಲಿ ರೋಟರಿ ನರ್ಸರಿ ಸ್ಕೂಲ್ ಹಾಲ್‌ನಲ್ಲಿ ಸಸ್ಯ ಸಂವರ್ಧನೆ ಕುರಿತು ಉಪನ್ಯಾಸ ನೀಡುತ್ತಾ ಮಾತನಾಡಿದರು.
ಕರಾವಳಿ ಹಾಗೂ ಮಲೆನಾಡಿನಲ್ಲಿ ನೀರಿನ ಟ್ಯಾಂಕ್‌ಗಳು ಓಡಾಡುತ್ತಿವೆ ಎಂದರೆ ನಮಗೆ ಪರಿಸರ ಕಾಳಜಿ ಎಷ್ಟಿದೆ ಎಂಬುವುದು ಅರಿವಾಗುತ್ತದೆ. ಬಹುತೇಕ ಅರಣ್ಯ ಭಾಗಗಳಿದ್ದರೂ ಅದನ್ನು ಸಂರಕ್ಷಿಸುವ ಪ್ರಯತ್ನದಲ್ಲಿ ಮಾನವ ವಿಫಲನಾಗುತ್ತಿದ್ದಾನೆ ಇದು ಕ್ರಮೇಣ ನೀರಿನ ಅಭಾವಕ್ಕೆ ಕಾರಣವಾಗುತ್ತಿದೆ. ಪರಿಸರ ಮತ್ತು ಮಾನವ ಒಂದಕ್ಕೊಂದು ಪೂರಕವಾಗಿ ಮುನ್ನೆಡೆದರೆ ಮಾತ್ರ ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ. ಆದುದರಿಂದ ಮರಗಿಡಗಳನ್ನು ಪ್ರೀತಿಸಿ ಅವುಗಳ ಬಗ್ಗೆ ಕಾಳಜಿ ತೋರಿ ಎಂದವರು ನುಡಿದರು.
ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಅಧ್ಯಕ್ಷತೆವಹಿಸಿದ್ದರು.
ಅಂತರಾಷ್ಟ್ರೀಯ ರೋಟರಿಗೆ ಕೊಡುಗೆ ನೀಡಿದ ಶ್ರೀಧರ ಆಚಾರ್, ಪ್ರದೀಪ ವಾಜ್, ಸತೀಶ್ ಕೋಟ್ಯಾನ್, ಜುಬಿನ್ ತೋಳಾರ್, ಮಾಲಿನಿ ಎಂ. ಎನ್. ಅಡಿಗ ಅವರಿಗೆ ಪಿಎಚ್‌ಎಫ್ ಪಿನ್ ಹಸ್ತಾಂತರಿಸಲಾಯಿತು. ಡಾ. ರಾಜರಾಮ ಶೆಟ್ಟಿ ವೃತ್ತಿಪರ ಮಾಹಿತಿ ನೀಡಿದರು. ಡಾ. ಎಂ. ಎನ್. ಅಡಿಗ ರೋಟರಿ ಮಹಿತಿ ನೀಡಿದರು. ಕುಂದಾಪುರದ ಖ್ಯಾತ ಹಿರಿಯ ವೈದ್ಯ ಡಾ. ಎನ್. ಪಿ. ಕಮಲ್, ರೋಟರಿ ಕ್ಲಬ್ ಕುಂದಾಪುರದ ಕಾರ್ಯದರ್ಶಿ ಸಂತೋಷ ಕೋಣಿ ಉಪಸ್ಥಿತರಿದ್ದರು. ನಿವೃತ್ತ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಸುರೇಶ್ ಆಚಾರ್ ವಂದಿಸಿದರು. ಮನೋಜ್ ನಾಯರ್, ಶ್ರೀಧರ ಸುವರ್ಣ ಸಹಕರಿಸಿದರು.