ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ವೈದ್ಯಕೀಯ ವೃತ್ತಿ ಒಂದು ವೃತ್ತಿ ಮಾತ್ರವಲ್ಲದೆ, ಜನರ ನಿಸ್ವಾರ್ಥ ಸೇವೆ ಮಾಡಲು ಇರುವ ಮಾರ್ಗ. ವೈದ್ಯಕೀಯ ಶಿಕ್ಷಣದಲ್ಲಿ ಪ್ರಮಾಣಪತ್ರ ಪಡೆದುಕೊಂಡು ಹೆಸರಿಗೆ ವೈದ್ಯರಾಗದೇ ಜನಸೇವೆ ಮಾಡಿ ಜನರಿಂದ ಮೆಚ್ಚುಗೆ ಪಡೆಯಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಹೇಳಿದರು.
ಮೂಡುಬಿದಿರೆಯ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಆಳ್ವಾಸ್ ಆಯುರ್ವೇದ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ನಡೆದ “ಸಂಪನ್ನಮ್” ಬೀಳ್ಕೊಡುಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಒಬ್ಬ ಜವಾಬ್ದಾರಿಯುತ ವೈದ್ಯನಾಗಿ ಕೆಲಸ ಮಾಡಿದಾಗ ಮಾತ್ರ, ಜನರಿಗೆ ವಿಶ್ವಾಸ ಮೂಡಲು ಸಾಧ್ಯ. ಲಾಭಕ್ಕಾಗಿ ಕೆಲಸ ಮಾಡದೇ ಜನರ ನಂಬಿಕೆ ಉಳಿಸಿಕೊಳ್ಳುವ ವೈದ್ಯರಾಗಬೇಕು ಎಂದು ಕಿವಿಮಾತು ಹೇಳಿದರು.
ಮನುಷ್ಯ ಮಾಡುವ ತಪ್ಪಿನಿಂದ ಕೊರೋನಾದಂತಹ ಸಾಂಕ್ರಾಮಿಕ ರೋಗಗಳು ಬರುವುದು ಸಹಜ. ಹಾಗೆಂದು ಭಯಪಟ್ಟು ಪಲಾಯನ ಮಾಡುವುದರ ಬದಲು, ಅದನ್ನು ಎದುರಿಸಬೇಕು. ಓಡಿ ಹೋಗುವವರಾದರೆ, ವೈದ್ಯಕೀಯ ಪದವಿ ಪಡೆಯುವುದೇ ವ್ಯರ್ಥ” ಎಂದು ಹೇಳಿದ ಡಾ. ಆಳ್ವ, ಕೊರೊನಾ ಕುರಿತು ಜನಸಾಮಾನ್ಯರಿಗೆ ಹೆಚ್ಚಿನ ವೈದ್ಯಕೀಯ ಸಲಹೆಗಳನ್ನು ನೀಡುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿದರು.
ಭಾರತದಲ್ಲಿ ಆಯುರ್ವೇದದ ಇತಿಹಾಸ ಅಗಾಧವಾಗಿದ್ದರೂ, ಸಮಾಜದಲ್ಲಿ ಅದಕ್ಕೆ ಸರಿಯಾದ ಪ್ರಾಮುಖ್ಯತೆ ಸಿಗಲಿಲ್ಲ. ಶತಮಾನಗಳ ಕಾಲ ಕೆಲವರ ಜ್ಞಾನಕ್ಕೆ ಸೀಮಿತವಾಗಿದ್ದ ಆಯುರ್ವೇದ ಇದೀಗ ಸಮಾಜದ ಮುಖ್ಯವಾಹಿನಿಗೆ ಬರುತ್ತಿದೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೇಶೀ ಔಷಧಗಳಿಗೆ ಪ್ರಾಮುಖ್ಯತೆಯನ್ನು ನೀಡುತ್ತಿದೆ’ ಎಂದು ಅಭಿಪ್ರಾಯಪಟ್ಟರು.
ಈ ಬೀಳ್ಕೊಡುಗೆ ಸಮಾರಂಭದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಡಾ.ಆಳ್ವ ಫಲಕ ಪ್ರದಾನ ಮಾಡಿದರು. ಬಳಿಕ, ವಿದ್ಯಾರ್ಥಿಗಳಾದ ಸುಮಯ್ಯ, ಅನುಷಾ ಮತ್ತು ಇಂದ್ರನೀಲ್, ಕಳೆದ ೫ ವರ್ಷದ ವಿದ್ಯಾರ್ಥಿ ಜೀವನದ ಅನುಭವವನ್ನು ಹಂಚಿಕೊಂಡರು.
ವಿದ್ಯಾರ್ಥಿ ವರ್ಗದ ಮಾರ್ಗದರ್ಶಕ ಡಾ.ವಿಕ್ರಂ, ಡಾ.ಮಂಜುನಾಥ್ ಭಟ್ ಕಾರ‍್ಯಕ್ರಮದಲ್ಲಿ ಉಪಸ್ಥಿತರಿದ್ದರು. ಆಳ್ವಾಸ್ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ಸಚಿತ್ ಎಂ ಸ್ವಾಗತಿಸಿ, ಡಾ.ಕೆ.ಎನ್.ರಾಜಶೇಖರ್ ವಂದಿಸಿದರು. ಡಾ.ಗೀತಾ ಕಾರ್ಯಕ್ರಮ ನಿರೂಪಿಸಿದರು.