ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನೈಸರ್ಗಿಕ ಉತ್ಪನ್ನ ಮತ್ತು ಉತ್ತಮ ಪೋಷಕಾಂಶಗಳನ್ನು ಒಳಗೊಂಡಿರುವ ಪೋಷಕ್ ಹಾಗೂ ರಿಲ್ಯಾಕ್ಸ್ ಟೀ ಮನೆ ಮನೆ ಮನೆಗಳನ್ನು ತಲುಪಲಿ ಎಂದು ಬೈಂದೂರು ಕ್ಷೇತ್ರದ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಹೇಳಿದರು.
ಅವರು ಆಲೂರು-ಕಳಿಯ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದಲ್ಲಿ ಶುಕ್ರವಾರ “ಚಿತ್ರಕೂಟ ಪೋಷಕ್” ಉತ್ಪನ್ನವನ್ನು ಬಿಡುಗಡೆಗೊಳಿಸಿ ಮಾತನಾಡಿ ಕೊರೋನಾ ಬಳಿಕ ಆಯುರ್ವೇದ ಉತ್ಪನ್ನಗಳಿಗೆ ಮಹತ್ವ ಜನರಿಗೆ ಅರಿವಾಗಿದೆ. ಚಿತ್ರಕೂಟವೂ ಉತ್ತಮ ಚಿಕಿತ್ಸೆಗೆ ಹೆಸರಾಗಿದೆ. ಉತ್ತಮ ಮಾರುಕಟ್ಟೆ ಸೌಲಭ್ಯವನ್ನು ಬಳಸಿಕೊಂಡರೆ ಬಹುಬೇಗ ಎಲ್ಲೆಡೆಯೂ ತಲುಪಲು ಸಾಧ್ಯವಿದೆ ಎಂದರು.
ರಿಲ್ಯಾಕ್ಸ್ ಟೀ ಉತ್ಪನ್ನ ಬಿಡುಗಡೆಗೊಳಿಸಿದ ಎಂ.ಎಸ್. ಮಂಜ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷರಾದ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ಅವರು ಮಾತನಾಡಿ ಇಂದು ಮಾರುಕಟ್ಟೆಯಲ್ಲಿ ದೊರೆಯುವ ಬಹುಪಾಲು ವಸ್ತುಗಳು ಕಲಬೆರಕೆಯಿಂದ ಕೂಡಿದೆ. ಅವುಗಳು ನಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುತ್ತಿದೆ. ಇದರ ನಡುವೆ ಉದ್ಯಮ ಮುನ್ನಡೆಸುವುದರ ಜೊತೆಗೆ ಜನರಿಗೆ ಉತ್ತಮ ಆರೋಗ್ಯ ದೊರೆಯುವಂತಾಗಬೇಕು ಎಂಬ ಸದುದ್ದೇಶದೊಂದಿಗೆ ಚಿತ್ರಕೂಟ ಸಂಸ್ಥೆಯು ಉತ್ತಮ ಆಯುರ್ವೇದ ಉತ್ಪನ್ನಗಳನ್ನು ಬಿಡುಗಡೆಗೊಳಿಸಿದೆ. ಗ್ರಾಮೀಣ ಭಾಗದಲ್ಲಿ ಇಂತಹದ್ದೊಂದು ಸಾಹಸ ಮಾಡುವುದು ಸಣ್ಣ ವಿಚಾರವಲ್ಲ ಎಂದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಚಿತ್ರಕೂಟದ ಡಾ. ರಾಜೇಶ್ ಬಾಯರಿ, ಚಿತ್ರಕೂಟ ಕಳೆದ ಹಲವು ವರ್ಷಗಳಿಂದ ಉತ್ತಮ ಆಯುರ್ವೇದ ಚಿಕಿತ್ಸಾ ಸೌಲಭ್ಯವನ್ನು ಅಳವಡಿಸಿಕೊಂಡಿದೆ. ನಾವು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವ ಎಲ್ಲಾ ಉತ್ಪನ್ನಗಳನ್ನು ಈ ಮೊದಲೇ ನಮ್ಮಲ್ಲಿ ಚಿಕಿತ್ಸೆಗೆ ಬರುವವರಿಗೆ ನೀಡಲಾಗುತ್ತಿತ್ತು. ಉತ್ಪನ್ನಗಳ ಮಾರುಕಟ್ಟೆಗೆ ಬಂದ ಬಳಿಕ ಎಲ್ಲೆಡೆಯೂ ಉತ್ತಮ ಪ್ರತಿಕ್ರಿಯೆ ಬರತೊಡಗಿದೆ. ರಾಜ್ಯದ ಎಂಟು ಜಿಲ್ಲೆಗಳಲ್ಲಿ ಈಗಾಗಲೇ ಮಕ್ಕಳಿಗಾಗಿ ತಯಾರಿಸಿದ ಶಿಶು ಪೋಷಕ್ ಉತ್ಪನ್ನಕ್ಕೆ ಉತ್ತಮ ಬೇಡಿಕೆ ಇದೆ. ಇಂದು ಬಿಡುಗಡೆಯಾಗಿರುವ ಪೊಷಕ್ ಕೂಡ ಉತ್ತಮ ಪೋಷಕಾಂಶವನ್ನು ಒಳಗೊಂಡಿರುವ ನೈಸರ್ಗಿಕ ಉತ್ಪನ್ನವಾಗಿದ್ದು ಮೂರು ವರ್ಷದ ಮೇಲ್ಪಟ್ಟವರು ಸೇವಿಸಬಹುದಾಗಿದೆ ಎಂದರು.
ಆಲೂರು ಗ್ರಾಪಂ ಉಪಾಧ್ಯಕ್ಷ ರವಿ ಶೆಟ್ಟಿ, ತಾಪಂ ಸದಸ್ಯ ಉದಯ ಜಿ. ಪೂಜಾರಿ, ವೈದ್ಯ ಡಾ. ಅತುಲ್ ಕುಮಾರ್ ಶೆಟ್ಟಿ, ಹಿರಿಯ ಕೃಷಿಕ ಮಹಾಬಲ ಬಾಯರಿ ಉಪಸ್ಥಿತರಿದ್ದರು.
ಮಯೂರ ಕಾರ್ತಿಕ್ ಉಡುಪ ಪ್ರಾರ್ಥಿಸಿದರು. ಪತ್ರಕರ್ತ ಪ್ರಭಾಕರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಚಿತ್ರಕೂಟದ ಡಾ ಅನುಲೇಖಾ ರಾಜೇಶ್ ವಂದಿಸಿದರು.