ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಸಮಾಜ ಸೇವಕ, ಕೊಂಕಣಿ ಖಾರ್ವಿ ಸಮಾಜದ ಹಿರಿಯ ಮುಖಂಡ ಜಿ. ಗಣಪತಿ ಶಿಪಾ (77) ಅಲ್ಪಕಾಲದ ಅಸೌಖ್ಯದಿಂದ ಗಂಗೊಳ್ಳಿಯ ಸ್ವಗೃಹದಲ್ಲಿ ನಿಧನರಾದರು.
ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದ ಇವರು ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದಲ್ಲಿ ವಿವಿಧ ಹುದ್ದೆಗಳಲ್ಲಿ ಸುಮಾರು 36 ವರ್ಷ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ್ದರು. ಕೊಂಕಣಿ ಖಾರ್ವಿ ವಿದ್ಯಾ ಪ್ರಸಾರಕ ಸಂಘ ಕುಂದಾಪುರ ಇದರ ಸ್ಥಾಪಕ ಸದಸ್ಯರಾಗಿ, ಗಂಗೊಳ್ಳಿಯ ಸೇವಾ ಸಂಗಮ ನಿವೇದಿತಾ ಶಿಶು ಮಂದಿರದಲ್ಲಿ ಅಧ್ಯಕ್ಷರಾಗಿ, ಅಖಿಲ ಕರ್ನಾಟಕ ಕೊಂಕಣ ಖಾರ್ವಿ ಮಹಾಜನ ಸಂಘದಲ್ಲಿ ಹಾಗೂ ವಿವಿಧ ಸಂಘ ಸಂಸ್ಥೆಗಳಲ್ಲಿ ಅನೇಕ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದ ಇವರು ಕೊಂಕಣಿ ಖಾರ್ವಿ ಸಮಾಜದ ಏಳಿಗೆಗೆ ಶ್ರಮಿಸಿದ್ದರು. ಕರ್ನಾಟಕ ಕೊಂಕಣಿ
ಸಾಹಿತ್ಯ ಅಕಾಡೆಮಿ ಇವರಿಗೆ ಕೊಂಕಣಿ ನಕ್ಷತ್ರ ಪ್ರಶಸ್ತಿ ಮತ್ತು ಕುಂದಾಪುರದ ವಿದ್ಯಾರಂಗ ಮಿತ್ರಮಂಡಳಿ ಸಮಾಜ ಸೇವಕ ಪ್ರಶಸ್ತಿ ನೀಡಿ ಗೌರವಿಸಿತ್ತು. ಶೈಕ್ಷಣಿಕ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಜನಾನುರಾಗಿದ್ದರು. ಮೃತರು ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.










