ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮನಸ್ಸಿನಲ್ಲಿ ಅನುಭವ ಮತ್ತು ಸಂವೇದನೆಗಳ ಒತ್ತಡ ಸೃಷ್ಟಿಯಾದಾಗ ಕವಿತೆ ಹುಟ್ಟುತ್ತದೆ. ಸಾಮಾನ್ಯವಾಗಿ ಒಬ್ಬನ ಆರಂಭದ ಕವಿತೆಗಳು ಶ್ರೇಷ್ಠವಾಗಿರುವುದಿಲ್ಲ. ಅನುಭವ ಮತ್ತು ಸಂವೇದನೆಗಳು ಮಾಗುತ್ತ ಹೋದಂತೆ ಹಾಗೂ ಅವುಗಳನ್ನು ವ್ಯಕ್ತ ಪಡಿಸಲು ಸೂಕ್ತವೆನಿಸುವ ಭಾಷೆ ಕರಗತವಾದಾಗ ಶ್ರೇಷ್ಠ ಕವಿತೆಗಳು ಹುಟ್ಟುತ್ತವೆ ಎಂದು ಸಾಹಿತಿ ಎ.ಎಸ್.ಎನ್. ಹೆಬ್ಬಾರ್ ಹೇಳಿದರು.
ಅವರು ನಾಯ್ಕನಕಟ್ಟೆ ಶ್ರೀ ಲಕ್ಷ್ಮೀ ಶ್ರೀ ನಾಗಪ್ಪಯ್ಯ ನಾಯಕ್ ಸದ್ಭಾವನಾ ವೇದಿಕೆ, ಬೀದರ್‌ನ ದೇಶಪಾಂಡೆ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಬೆಂಗಳೂರಿನ ಗೋಪಾಲಕೃಷ್ಣ ಅಡಿಗ ಶತಮಾನ ಪ್ರತಿಷ್ಠಾನ ಸಂಯುಕ್ತ ಆಶ್ರಯದಲ್ಲಿ ಉಪ್ಪುಂದದ ರೈತಸಿರಿ ಸಭಾಭವನದಲ್ಲಿ ಭಾನುವಾರ ನಡೆದ ಕೆ. ಪುಂಡಲೀಕ ನಾಯಕ್ ಅವರ ‘ಬದುಕು ಬಣ್ಣದ ಬುಗುರಿ’ ಮತ್ತು ‘ಕಾವ್ಯ ಸಂಜೀವಿನಿ’ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಹಿರಿಯ ಸಾಹಿತಿಗಳಾದ ಡಾ. ಎಂ. ಜಿ. ದೇಶಪಾಂಡೆ ಮತ್ತು ಡಾ. ಪಾರ್ವತಿ ಜಿ. ಐತಾಳ್ ಕೃತಿ ಬಿಡುಗಡೆ ಮಾಡಿ, ಶುಭ ಹಾರೈಸಿದರು. ಸಾಹಿತಿ, ವಿಮರ್ಶಕ ಬೆಳಗೋಡು ರಮೇಶ ಭಟ್ ಪುಸ್ತಕ ಪರಿಚಯ ಮಾಡಿದರು. ಸಾಹಿತಿ ರಾಜಾಚಾರ್ಯ ಆಶಯ ನುಡಿಗಳನ್ನಾಡಿದರು.
ಈ ಸಂದರ್ಭದಲ್ಲಿ ನಿವೃತ್ತ ಪ್ರಾಧ್ಯಾಪಕ ಪ್ರೊ. ಸಿ. ಉಪೇಂದ್ರ ಸೋಮಯಾಜಿ, ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಮರವಂತೆ, ಲೇಖಕ, ಜಾದೂಗಾರ ಓಂ ಗಣೇಶ ಉಪ್ಪುಂದ, ಪತ್ರಕರ್ತ ಯು. ಎಸ್. ಶೆಣೈ ಉಪಸ್ಥಿತರಿದ್ದರು.
ಕವಿ ಪುಂಡಲೀಕ ನಾಯ್ಕ್ ಸ್ವಾಗತಿಸಿದರು. ಉಪನ್ಯಾಸಕ ಉದಯ ನಾಯ್ಕ್ ನಿರೂಪಿಸಿ ವಂದಿಸಿದರು.