ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಶ್ರೀರಾಮ ವಿವಿಧೋದ್ದೇಶ ಟ್ರಸ್ಟ್ ಆಶ್ರಯದಲ್ಲಿ ಪುಸ್ತಕ ವಿತರಣೆ ಹಾಗೂ ಅಭಿನಂದನಾ ಸಮಾರಂಭ ಇಲ್ಲಿನ ಶ್ರೀ ಸೀತಾರಾಮಚಂದ್ರ ಕಲ್ಯಾಣ ಮಂಟಪದಲ್ಲಿ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಶ್ವ ರಾಮಕ್ಷತ್ರಿಯ ಮಹಾಸಂಘದ ಅಧ್ಯಕ್ಷ ಶಶಿಧರ್ ನಾಯ್ಕ್ ಮಾತನಾಡಿ ರಾಮಕ್ಷತ್ರಿಯ ಸಮಾಜ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಸಾಧಿಸುವುದು ಬಹುಮುಖ್ಯವಾಗಿದ್ದು ಆ ನೆಲೆಯಲ್ಲಿ ಉಳ್ಳವರು ಇಲ್ಲದವರಿಗೆ ಒಂದಿಲ್ಲೊಂದು ರೂಪದಲ್ಲಿ ನೆರವಾಗಬೇಕಿದೆ. ವಿಶ್ವ ರಾಮಕ್ಷತ್ರಿಯ ಮಹಾಸಂಘದ ಮೂಲಕ ರಾಮಕ್ಷತ್ರಿಯರ ಒಟ್ಟು ಜನಸಂಖ್ಯೆಯ ಮಾಹಿತಿ ಕಲೆಹಾಕುವ ಕಾರ್ಯ ಆರಂಭಿಸಲಾಗಿದೆ. ಎಲ್ಲಾ ರಾಮಕ್ಷತ್ರಿಯ ಸಂಘಗಳನ್ನು ಒಂದುಗೂಡಿಸಿ ಸಮಾಜದ ಅಭ್ಯುದಯಕ್ಕಾಗಿ ಶ್ರಮಿಸಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ರಾಮ ವಿವಿಧೋದ್ದೇಶ ಟ್ರಸ್ಟ್ ಅಧ್ಯಕ್ಷರಾದ ಬಿ. ರಾಮಕೃಷ್ಣ ಶೇರುಗಾರ್ ಮಾತನಾಡಿ, ರಾಮಕ್ಷತ್ರಿಯ ಸಮಾಜದವರಿಗಾಗಿ ವಿವಿಧ ಸಹಾಯ, ನೆರವು ನೀಡುವ ಉದ್ದೇಶದಿಂದ ಆರಂಭಿಸಲಾದ ಟ್ರಸ್ಟ್ ಮೂಲಕ ಹತ್ತಾರು ಸೇವಾ ಕಾರ್ಯಗಳನ್ನು ಮಾಡಲಾಗುತ್ತಿದೆ. ವಿದ್ಯಾರ್ಥಿ ದತ್ತು ಸ್ವೀಕಾರ, ವಿದ್ಯಾರ್ಥಿ ವೇತನ, ಪುಸ್ತಕ ವಿತರಣೆ, ಗೃಹ ನಿರ್ಮಾಣ, ವಿಧವಾ ವೇತನ ಮುಂತಾದ ಯೋಜನೆಗಳನ್ನು ಹಲವು ವರ್ಷಗಳಿಂದ ಹಮ್ಮಿಕೊಳ್ಳಲಾಗಿದೆ ಎಂದರು.
ವಿಶ್ವ ರಾಮಕ್ಷತ್ರಿಯ ಮಹಾಸಂಘದ ಅಧ್ಯಕ್ಷ ಶಶಿಧರ್ ನಾಯ್ಕ್, ಮುಖ್ಯಮಂತ್ರಿ ಚಿನ್ನದ ಪದಕ ಸ್ವೀಕರಿಸಿರುವ ಲೋಕಾಯುಕ್ತ ಇನ್ಸ್ಪೆಕ್ಟರ್ ರಾಘವೇಂದ್ರ ಎಂ. ಅವರನ್ನು ಸನ್ಮಾನಿಸಲಾಯಿತು. ಬಿಜೂರು ನಾಗರಾಜ ನಾಯ್ಕ್ ಹಾಗೂ ವಸಂತಿ ದಂಪತಿಗಳ ಕುಟುಂಬಕ್ಕೆ ಟ್ರಸ್ಟ್‌ನ ವತಿಯಿಂದ ನಿರ್ಮಿಸಲಾದ ನೂತನ ಗೃಹದ ಕೀಲಿಕೈ ಹಸ್ತಾಂತರಿಸಲಾಯಿತು. ಅರ್ಹ ವಿಧ್ಯಾರ್ಥಿಗಳಿಗೆ ನೋಟ್ಪುಸ್ತಕಗಳನ್ನು ವಿತರಿಸಲಾಯಿತು.
ಶ್ರೀ ರಾಮ ಕ್ರೆಡಿಟ್ ಕೋ-ಆಪರೇಟಿವ್ನ ಅಧ್ಯಕ್ಷ ನಾಗರಾಜ ಕಾಮಧೇನು, ಬೈಂದೂರು ರಾಮಕ್ಷತ್ರಿಯ ಸಂಘದ ಅಧ್ಯಕ್ಷ ಪರಮೇಶ್ವರ ಹೋಬಳಿದಾರ್, ರಾಮಕ್ಷತ್ರಿಯ ಮಾತೃಮಂಡಳಿ ಅಧ್ಯಕ್ಷೆ ವನಜಾ ಭಾಸ್ಕರ್, ಟ್ರಸ್ಟಿಗಳಾದ ವೆಂಕಟರಮಣ ಬಿಜೂರು, ಬಿ. ಶ್ರೀಧರ್ ಪಡುವರಿ, ವಿಶ್ವೇಶ್ವರ ಮಯ್ಯಾಡಿ, ಗೋಪಾಲಕೃಷ್ಣ ಕಲ್ಮಕ್ಕಿ, ಶ್ರೀಧರ ಪಿ. ಪಡುವರಿ, ಸುಧಾಕರ ಹೊಸಾಡು ಉಪಸ್ಥಿತರಿದ್ದರು.
ಟ್ರಸ್ಟ್‌ನ ಕಾರ್ಯದರ್ಶಿ ಆನಂದ ಮದ್ದೋಡಿ ಪ್ರಾಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿದರು. ಶಿಕ್ಷಕ ವೆಂಕಟರಮಣ ಮಯ್ಯಾಡಿ ವಂದಿಸಿದರು. ಶಿಕ್ಷಕ ಸುಧಾಕರ ಪಿ. ಬೈಂದೂರು, ಕೇಶವ ನಾಯ್ಕ್ ಬಿಜೂರು ಕಾರ್ಯಕ್ರಮ ನಿರೂಪಿಸಿದರು.