ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕಲೆ, ಸಂಸ್ಕೃತಿಯನ್ನು ಉಸಿರಾಗಿಸಿಕೊಂಡ ಸಂಸ್ಥೆಗಳು ಮುಂದಿನ ಪೀಳಿಗೆಗೆ ಅದರ ಸೊಗಡು ತಲುಪಿಸುವ ಕೆಲಸ ಮಾಡುತ್ತವೆ. ಅಂತಹ ಸಂಸ್ಥೆಯನ್ನು ಪ್ರೋತ್ಸಾಹಿಸುವುದು ಕೂಡ ನಾವು ಮಾಡಬಹುದಾದ ಬಹುದೊಡ್ಡ ಸೇವೆ ಎಂದು
ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್‌ನ ಮ್ಯಾನೆಜಿಂಗ್ ಟ್ರಸ್ಟೀ ಗೋವಿಂದ ಬಾಬು ಪೂಜಾರಿ ಹೇಳಿದರು.ಅವರು ಇಲ್ಲಿನ ಶಾರದ ವೇದಿಕೆಯಲ್ಲಿ ಸುರಭಿ ರಿ. ಬೈಂದೂರು ಆಶ್ರಯದಲ್ಲಿ ನಡೆದ 21ನೇ ವರ್ಷದ ಸಂಭ್ರಮ ಮೂರು ದಿನಗಳ ಸುರಭಿ ಜೈಸಿರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬೈಂದೂರು ತಾ.ಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾದ ಪುಪ್ಪರಾಜ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಕಾರ್ಯಕ್ರಮದಲ್ಲಿ ಕುಂದಾಪುರ ಕಲಾಕ್ಷೇತ್ರ ಅಧ್ಯಕ್ಷರಾದ ಬಿ. ಕಿಶೋರ್ ಕುಮಾರ್, ಜೀವ ವಿಮಾ ಅಭಿವೃದ್ಧಿ ಅಧಕಾರಿಗಳಾದ ರಾಮ ಮೋಗವೀರ ಗರ್ಜಿನಹಿತ್ಲು, ಸುರಭಿ ಕಾರ್ಯದರ್ಶಿ ಭಾಸ್ಕರ ಬಾಡ ಉಪಸ್ಥಿತರಿದ್ದರು.
ಸುರಭಿ ಯಕ್ಷಗಾನ ಗುರುಗಳಾದ ಪ್ರಶಾಂತ ಮಯ್ಯ ದಾರಿಮಕ್ಕಿ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಸುರಭಿ ಬೈಂದೂರು ಅಧ್ಯಕ್ಷ ನಾಗರಾಜ ಪಿ. ಯಡ್ತರೆ ಸ್ವಾಗತಿಸಿದರು, ಗಣೇಶ್ ಟೈಲರ್ ಧನ್ಯವಾದಗೈದರು, ರಾಮಕೃಷ್ಣ ದೇವಾಡಿಗ ಉಪ್ಪುಂದ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಬಳಿಕ ಸುರಭಿ ವಿದ್ಯಾರ್ಥಿಗಳಿಂದ ಮೀನಾಕ್ಷಿ ಕಲ್ಯಾಣ ಮತ್ತು ಪಾಂಚಜನ್ಯ ಯಕ್ಷಗಾನ ಜರುಗಿತು.