ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಪುಣ್ಯ ನದಿ ಸೌಪರ್ಣಿಕೆಯ ಒಡಲು ಬತ್ತುತ್ತಿದ್ದು, ಕಳೆದ 2-3 ದಿನಗಳಿಂದ ಸ್ನಾನಘಟ್ಟ ಭಾಗದಲ್ಲಿ ಮೀನು ಹಾಗೂ ಜಲಚರಗಳು ಹೆಚ್ಚಿನ ಸಂಖ್ಯೆಯಲ್ಲಿ ಸತ್ತು ಪರಿಸರದಲ್ಲಿ ವಾಸನೆ ಬೀರುತ್ತಿದೆ.
ಪ್ರತಿ ವರ್ಷವೂ ಮಾರ್ಚ್-ಎಪ್ರಿಲ್ ತಿಂಗಳಿನಲ್ಲಿ ಸುಡುವ ಬಿಸಿಲ ಬೇಗೆಯಿಂದಾಗಿ ನದಿಯ ನೀರು ಖಾಲಿಯಾಗುವುದರಿಂದಾಗಿ ನೀರನ್ನೆ ನಂಬಿಕೊಂಡಿರುವ ಜಲಚರಗಳ ಜೀವಕ್ಕೆ ಕುತ್ತು ಬರುವುದು ಮಾಮೂಲಿಯಾಗಿದೆ. ಹೆಮ್ಮಾಲ, ಕರ್ಸೆ, ಕಲ್ಮೊಗ ಮುಂತಾದ ಜಾತಿಯ ರಾಶಿ ರಾಶಿ ಮೀನುಗಳು ಸಾವನ್ನಪ್ಪುತ್ತಿದ್ದು, ಸತ್ತು ಬೀಳುತ್ತಿರುವ ಮೀನಿನಿಂದಾಗಿ ಪರಿಸರದಲ್ಲಿ ಗಬ್ಬು ವಾಸನೆ ಹರಡುತ್ತಿದೆ. ಇದರಿಂದಾಗಿ ಸ್ಥಳೀಯರು ಸಾಂಕ್ರಾಮಿಕ ರೋಗ ಬರಬಹುದೆನ್ನುವ ಆತಂಕದಲ್ಲಿದ್ದಾರೆ.
ಬಿಸಿಲಿನ ತಾಪದಿಂದಾಗಿ ನದಿಯ ನೀರುಗಳು ಖಾಲಿಯಾಗುತ್ತಿದ್ದು, ಸ್ನಾನ ಮಾಡಿದ ನೀರುಗಳು ಸುಗಮವಾಗಿ ಹರಿದು ಹೋಗದೆ ಗುಂಡಿಗಳಲ್ಲಿ ನಿಲ್ಲುತ್ತಿದೆ. ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿರುವುದರಿಂದ ಹಾಗೂ ಸೌಪರ್ಣಿಕೆಯ ಸ್ನಾನ ಘಟ್ಟದ ಬಳಿಯಲ್ಲಿ ನೀರಿನ ಸಂಗ್ರಹಕ್ಕಾಗಿ ಡ್ಯಾಂ ನಿರ್ಮಾಣ ಮಾಡಿರುವುದರಿಂದಾಗಿ ಗುಂಡಿಯಲ್ಲಿ ಸಂಗ್ರಹವಾಗುವ ನೀರುಗಳಲ್ಲಿ ಸೇರಿಕೊಳ್ಳುವ ಮೀನುಗಳು, ಬಿಸಲಿನ ತಾಪದಿಂದ ಬಿಸಿಯಾಗುವ ನೀರಿನಲ್ಲಿ ಪ್ರಾಣ ಕಳೆದುಕೊಳ್ಳುತ್ತಿದೆ. ಸೌಪರ್ಣಿಕೆಯ ಒಡಲನ್ನು ಕಲುಷಿತಗೊಳಿಸುತ್ತಿರುವ ಘನ ಹಾಗೂ ದ್ರವ ತ್ಯಾಜ್ಯಗಳು ನೀರಿನೊಂದಿಗೆ ಸೇರಿ ರಾಸಾಯನಿಕ ಬದಲಾವಣೆಗಳನ್ನು ಕಂಡು ಮೀನುಗಳ ಮಾರಣ ಹೋಮಕ್ಕೆ ಪರೋಕ್ಷ ಕಾರಣವಾಗುತ್ತಿದೆ. ಇನ್ನು ಕೊಲ್ಲೂರು ಪರಿಸರದ ಹೋಟೆಲ್-ಲಾಡ್ಜ್, ದೇವಸ್ಥಾನ ಮಲಿನ ನೀರು ಸಹ ಸೌಪರ್ಣಿಕೆಯ ಒಡಲು ಸೇರುತ್ತಿರುವುದು ಮೀನಿನ ಸಾವಿಗೆ ಕಾರಣ ಎನ್ನಲಾಗುತ್ತಿದೆ. ಬಾಯಾರಿಕೆ ಇಂಗಿಸಿಕೊಳ್ಳಲು ಸೌಪರ್ಣಿಕೆಯ ನದಿಗೆ ಬರುವ ಕಾಡು ಪ್ರಾಣಿಗಳಿಗೂ ಮಲೀನ ಹಾಗೂ ವಿಷಯುಕ್ತ ನೀರು ಅಪಾಯ ತಂದೊಡ್ಡುವ ಸಾಧ್ಯತೆ ಇದೆ.
ಪುಣ್ಯನದಿ:
ಕೊಡಚಾದ್ರಿ ಬೆಟ್ಟದಿಂದ ಇಳಿದು ಬಂದು ಸೌಪರ್ಣಿಕೆಯನ್ನು ಸೇರುತ್ತಿರುವ ನೀರು, 64 ಪುಣ್ಯ ತೀರ್ಥಗಳ ಸಂಗಮ ಎನ್ನುವ ನಂಬಿಕೆ ಇದೆ. ಕೊಡಚಾದ್ರಿಯಲ್ಲಿನ ಗಿಡಮೂಲಿಕೆಗಳ ಸಾರದೊಂದಿಗೆ ಬರುವ ಈ ನೀರಿನಲ್ಲಿ ಸ್ನಾನ ಮಾಡಿದರೆ ಚರ್ಮ ರೋಗಗಳು ಗುಣವಾಗುತ್ತದೆ ಎನ್ನುವ ಅಚಲ ನಂಬಿಕೆ ಇರುವುದರಿಂದಾಗಿ ಕೊಲ್ಲೂರಿಗೆ ಬರುವ ಭಕ್ತರು ಅಗ್ನಿ ತೀರ್ಥ, ಕಾಶಿ ತೀರ್ಥ ಹಾಗೂ ಸೌಪರ್ಣಿಕೆಯ ಸ್ನಾನ ಘಟ್ಟಗಳಲ್ಲಿ ಪುಣ್ಯ ಸ್ನಾನವನ್ನು ಮಾಡುವುದು ರೂಢಿಯಾಗಿರಿಸಿಕೊಂಡಿದ್ದಾರೆ.
ಸೌಪರ್ಣಿಕಾ ನದಿ ನೀರು ವಿಷವಾಗುತ್ತಿರುವುದೇ ಜಲಚರಗಳ ಮಾರಣಹೋಮಕ್ಕೆ ಕಾರಣ. ಸೌಪರ್ಣಿಕ ನದಿ ತಟವು ದೇವರ ಸಂಚರಿಸಿದ, ಋಷಿಮುನಿಗಳು ಕೂತು ತಪಸ್ಸು ಮಾಡಿದ ಪವಿತ್ರ ಸ್ಥಳವೂ ಹೌದು. ಈ ಸೌಪರ್ಣಿಕಾ ನದಿ ಕುಲಷಿತವಾಗುತ್ತಿರುವುದು ಬೇಸರ ಸಂಗತಿ. ಭಕ್ತರಿಗೆ ಅಮೃತಸಮಾನ ಸೌಪರ್ಣಿಕಾ ನದಿಯ ನೀರಾದರೂ ಸಿಗಲಿ ಎಂದು ಹೋರಾಟ ಮಾಡುತ್ತಾ ಬಂದರೂ ಸ್ಪಂದನ ಇಲ್ಲದೆ ವ್ಯರ್ಥವಾಗುತ್ತಿದೆ. ಪರಿಸರ ಮಾಲಿನ್ಯ ಇಲಾಖೆಯಲ್ಲಿ ಮಾಲಿನ್ಯದ ಬಗ್ಗೆ ದೂರಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ. – ಹರೀಶ್ ತೋಳಾರ್ ಕೊಲ್ಲೂರು