ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: 12 ಸಂಖ್ಯಾ ಬಲದ ಕೋಡಿ ಗ್ರಾಮ ಪಂಚಾಯತ್‌ನಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೂ, ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಬಿ ಗೂ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಯಾವುದೇ ನಾಮಪತ್ರ ಸಲ್ಲಿಕೆ ಆಗದ ಕಾರಣ ಪ್ರಭಾಕರ ಮೆಂಡನ್ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅವರು ಸತತ 4ನೇ ಬಾರಿ ಸದಸ್ಯರಾಗಿ ಆಯ್ಕೆಯಾಗಿದ್ದು ಈ ಹಿಂದೆ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ಅನುಭವ ಇದ್ದು, ಇದೀಗ ಅಧ್ಯಕ್ಷರಾಗಿ, ಗ್ರಾಮಾಭಿವೃದ್ಧಿಗೆ ಶ್ರಮಿಸುವ ಇವರ ಮನೋಭಿಲಾಷೆಗೆ ಬೆಂಬಲ ಸಿಕ್ಕಂತಾಗಿದೆ. ಡಾ. ಅರುಣ್ ಕುಮಾರ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.
12 ಮಂದಿ ಸದಸ್ಯ ಬಲ ಹೊಂದಿರುವ ಕೋಡಿ ಪಂಚಾಯತ್‌ನಲ್ಲಿ ಆಂಥೋನಿ ಒಬ್ಬರೇ ಕಾಂಗ್ರೆಸ್ ಬೆಂಬಲಿತ ರಾಗಿ ಜಯಗಳಿಸಿದ್ದರು. ಉಳಿದೆಲ್ಲರೂ ಬಿಜೆಪಿ ಬೆಂಬಲಿತ ಸದಸ್ಯರೆ ಆಯ್ಕೆಯಾಗಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ವರ್ಗ ಬಿ ಇಂದ ಆಂಥೋನಿ ಡಿ ಸೋಜ ಒಬ್ಬರೇ ಅರ್ಹರಾಗಿದ್ದರೂ ಕಾಂಗ್ರೆಸ್ ಬೆಂಬಲಿತ ಏಕೈಕ ಪ್ರತಿನಿಧಿಯಾದ್ದರಿಂದ ಸೂಚಕರಾಗಿ ಬೆಂಬಲಿಸುವರಿಲ್ಲದೆ ಆಯ್ಕೆ ಪ್ರಕ್ರಿಯೆಗೆ ಹಿನ್ನಡೆಯಾಗಿದೆ. ಹೀಗಾಗಿ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಅಸಾಧ್ಯವಾಗಿ ಆಯ್ಕೆ ನಡೆಯಲಿಲ್ಲ ಈ ಬಗ್ಗೆ ಕಾನೂನು ಹೋರಾಟ ನಡೆಸುವುದಾಗಿ ಅವರು ತಿಳಿಸಿದ್ದಾರೆ.