ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಂಗಳೂರು, ಮೇ.7: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೂರ್ಣಪ್ರಮಾಣದ ಲಾಕ್‌ಡೌನ್ ಮಾಡಲು ಸರ್ಕಾರ ಮುಂದಾಗಿದ್ದು, ಸಚಿವರು, ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದ ಬಳಿಕ ಸಿಎಂ ಯಡಿಯೂರಪ್ಪ ಮೇ 10 ರಿಂದ 14 ದಿನಗಳ ಕಾಲ ಲಾಕ್‌ಡೌನ್ ಮಾಡುವ ನಿರ್ಧಾರವನ್ನು ಪ್ರಕಟಿಸಿದರು.
ಈ ಲಾಕ್‌ಡೌನ್ ಹೇಗಿರುತ್ತೆ?
ಲಾಕ್ಡೌನ್ ಸಮಯದಲ್ಲಿ ಪಾಸ್ ಇದ್ದವರಿಗೆ ಮಾತ್ರ ಸಂಚರಿಸಲು ಅನುಮತಿ ನೀಡಲು ಸರ್ಕಾರ ಮುಂದಾಗಿದೆ. ಈ ಸಂಬಂಧ ಶೀಘ್ರವೇ ಮಾರ್ಗಸೂಚಿ ಹೊರಡಿಸಲಿದೆ. ಅವಶ್ಯಕ, ತುರ್ತು ಸೇವೆ, ಸಂಚಾರಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ದಿನಸಿ, ಹಾಲು, ತರಕಾರಿ ಖರೀದಿಗೆ ಮಾತ್ರ ಸಮಯ ನಿಗದಿ ಮಾಡಿ ಅನುಮತಿ ನೀಡಲಾಗುತ್ತದೆ. ಅಂತರ್ ಜಿಲ್ಲಾ, ಅಂತಾರಾಜ್ಯ ಸಂಚಾರ ಸಂಪೂರ್ಣ ಬಂದ್ ಆಗಲಿದ್ದು, ಕೋವಿಡ್ ಸಂಬಂಧಿತ ಸರ್ಕಾರಿ ಇಲಾಖೆ, ಕಚೇರಿ-ಸಂಸ್ಥೆಗಳು ಬಿಟ್ಟು ಉಳಿದ ಎಲ್ಲಾ ಕಚೇರಿಗಳು ಬಂದ್ ಆಗಲಿದೆ. ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ. ಹೊಟೇಲ್, ರೆಸ್ಟೋರೆಂಟ್ ಗಳಿಂದ ಪಾರ್ಸೆಲ್ ಗೆ ಅವಕಾಶ. ಮದುವೆಗೆ 50 ಜನ ಮಾತ್ರ ಸೀಮಿತ ಮಾಡಲಾಗಿದೆ.
ಜಿಲ್ಲೆ, ರಾಜ್ಯಗಳ ಗಡಿ ಭಾಗಗಳಲ್ಲಿ ಬಿಗಿ ನಿರ್ಬಂಧ ಹೇರಲಾಗುತ್ತದೆ. ಮೈಕ್ರೋ ಕಂಟೈನ್ಮೆಂಟ್ ವ್ಯವಸ್ಥೆ ಮತ್ತಷ್ಟು ಬಿಗಿಯಾಗಿ ರಸ್ತೆಗಳಲ್ಲಿ ಬ್ಯಾರಿಕೇಡ್, ಪೊಲೀಸ್ ಕಾವಲು ಬಿಗಿಯಾಗಲಿದೆ. ಅನಗತ್ಯವಾಗಿ ಓಡಾಡುವವರ ಮೇಲೆ ಕೇಸ್ ಹಾಕಲಾಗುತ್ತದೆ. ಕೋವಿಡ್ ರೋಗಿಗಳ ಸಂಪರ್ಕಿತರಿಗೆ ಕಡ್ಡಾಯ ಹೋಂ ಕ್ವಾರಂಟೈನ್ಗೆ ಕ್ರಮ ಕೈಗೊಳ್ಳಲಾಗುತ್ತದೆ. ರೋಗಿಗಳನ್ನು ಮೊದಲು ಕೋವಿಡ್ ಕೇರ್ ಕೇಂದ್ರಗಳಿಗೆ ಕಡ್ಡಾಯವಾಗಿ ದಾಖಲಿಸಲಾಗುತ್ತದೆ. ಬಳಿಕ ರೋಗಿ ಸ್ಥಿತಿ ನೋಡಿ ಆಸ್ಪತ್ರೆಗಳಿಗೆ ದಾಖಲಿಸಲು ಕ್ರಮ ಕೈಗೊಳ್ಳಲಾಗುತ್ತದೆ.