ಕುಂದಾಪುರ: ಕುಂಭಾಶಿ ಉಪ ಕೇಂದ್ರದ ವ್ಯಾಪ್ತಿಗೆ ಒಳಪಟ್ಟಿರುವ ಗೋಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಲೇರಿಯಾ ರೋಗವನ್ನು ಯಶಸ್ವಿಯಾಗಿ ನಿಯಂತ್ರಿಸಲಾಗಿದೆ. ಮೂರು ಡೆಂಗ್ಯೂ ಪ್ರಕರಣ, ಒಂದು ಎಚ್1ಎನ್1 ಪ್ರಕರಣ ಈ ವ್ಯಾಪ್ತಿಯಲ್ಲಿ ಪತ್ತೆಯಾಗಿದ್ದು, ಅವುಗಳ ಚಿಕಿತ್ಸೆ ಹಾಗೂ ಹರಡದಂತೆ ತಡೆಯಲು ಸೂಕ್ತ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಕುಂಭಾಶಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅರುಣ್‌ಕುಮಾರ್ ಹೇಳಿದರು.
ಅವರು ಹೊಸತಾಗಿ ರಚನೆಯಾದ ಗೋಪಾಡಿ ಗ್ರಾಮ ಪಂಚಾಯತಿಯ ಪ್ರಥಮ ಸುತ್ತಿನ ಗ್ರಾಮಸಭೆಯನ್ನುದ್ದೇಶಿಸಿ ಮಾತನಾಡಿದರು.
ಗೋಪಾಡಿಗೆ ಸಮೀಪದ ಬೀಜಾಡಿ ಪಂಚಾಯತಿಯಲ್ಲಿ ಆರೋಗ್ಯ ಉಪಕೇಂದ್ರವಿದ್ದರೂ ಅಲ್ಲಿ ಚಿಕಿತ್ಸೆ ನೀಡಲಾಗುತ್ತಿಲ್ಲ. ಮತ್ತು ಆರೋಗ್ಯ ಸಹಾಯಕರು ಮನೆಗಳಿಗೆ ಭೇಟಿ ನೀಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದಾಗ ಅದಕ್ಕೆ ಉತ್ತರಿಸಿದ ವೈದ್ಯಾಧಿಕಾರಿಗಳು, ಗೋಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಒಬ್ಬರು ಆಶಾ ಕಾರ್ಯಕರ್ತೆರಯ ಅವಶ್ಯಕತೆ ಇದ್ದು, ಗ್ರಾಮ ಪಂಚಾಯತ್ ನಿಂದ ಆಶಾ ಕಾರ್ಯಕರ್ತೆಯನ್ನು ಶೀಘ್ರ ನೇಮಿಸಿದಲ್ಲಿ ಆರೋಗ್ಯ ಇಲಾಖೆಯಿಂದ ಕೂಡಲೇ ಅವರಿಗೆ ತರಬೇತಿ ನೀಡಲಾಗುವುದು ಎಂದರು.
ಗ್ರಾ.ಪಂ ಅಧ್ಯಕ್ಷೆ ಸರಸ್ವತಿ ಪುತ್ರನ್ ಗ್ರಾಮಸಭೆಯ ಅಧ್ಯಕ್ಷತೆ ವಹಿಸಿದ್ದರು.
ಗ್ರಾಮಸಭೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಗಣಪತಿ ಶ್ರೀಯಾನ್, ಉಪಾಧ್ಯಕ್ಷೆ ವೈಲೆಟ್ ಬರೆಟ್ಟೊ, ಗ್ರಾ.ಪಂ ಸದಸ್ಯರುಗಳು, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ, ಕೃಷಿ ಇಲಾಧಿಕಾರಿ ರಾಜೇಂದ್ರ ಶೆಟ್ಟಿಗಾರ್, ಮೆಸ್ಕಾಂ ಗೋಪಾಡಿ ಶಾಖೆಯ ಎ.ಡಿ. ಸಿದ್ಧಲಿಂಗಯ್ಯಪ್ಪ, ಗ್ರಾಮಲೆಕ್ಕಾಧಿಕಾರಿ ಸುಮಂಗಲ ಮೊದಲಾದವರು ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸ್ವಾಗತಿಸಿ, ನಿರ್ಣಯ ಮಂಡಿಸಿದರು.