ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮರವಂತೆಯಲ್ಲಿ ಮಂಗಳವಾರ ಆರಂಭವಾದ ಕಡಲ್ಕೊರೆತ ಬುಧವಾರ ಇನ್ನಷ್ಟು ತೀವ್ರ ಗತಿ ಪಡೆದುಕೊಂಡಿದೆ. ಇಲ್ಲಿನ ಮೀನುಗಾರಿಕಾ ಹೊರಬಂದರಿನ ಉತ್ತರ ತಡೆಗೋಡೆಯ ಉತ್ತರ ದಿಕ್ಕಿನ 500 ಮೀಟರ್ ಉದ್ದದ ತೀರಕ್ಕೆ ಅಪ್ಪಳಿಸುತ್ತಿರುವ ಅಲೆಗಳು ಈಗಾಗಲೇ ಎರಡು ಮೀಟರು ಅಗಲದ ಭೂಪ್ರದೇಶವನ್ನು ಕೊರೆದು ಸಮುದ್ರಕ್ಕೆ ಸೇರಿಸಿವೆ.
ಪಕ್ಕುಮನೆ ದಿನಕರ ಖಾರ್ವಿಗೆ ಸೇರಿದ ಮೀನುಗಾರಿಕಾ ಶೆಡ್ ಉರುಳಿದ್ದು, ಅದರ ಸಮೀಪದಲ್ಲಿರುವ ಪಕ್ಕುಮನೆ ಚಂದ್ರ ಖಾರ್ವಿ ಅವರ ಶೆಡ್‌ಅನ್ನು ಉಳಿಸಿಕೊಳ್ಳಲು ಅವರು ಮರಳಿನ ಚೀಲಗಳನ್ನು ಪೇರಿಸುವ ಕೆಲಸ ಮಾಡುತ್ತಿದ್ದಾರೆ. ಕೊರೆತ ನಡೆಯುತ್ತಿರುವ ಸ್ಥಳದಿಂದ 10 ರಿಂದ 15 ಮೀಟರ್ ಅಂತರದಲ್ಲಿ ಮೂರು ತಿಂಗಳ ಹಿಂದೆ ರಾಜ್ಯ ನೀರಾವರಿ ನಿಗಮದ ಲೆಕ್ಕ ಶೀರ್ಷಿಕೆಯ ರೂ 50 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಕಾಂಕ್ರೀಟ್ ರಸ್ತೆ, ಅದರಾಚೆಗೆ ಸುಮಾರು 25 ಮೀನುಗಾರರ ಮನೆಗಳಿವೆ. ಕೊರೆತ ಉಲ್ಬಣಿಸಿದರೆ ಇವುಗಳಿಗೆ ಅಪಾಯ ಇದೆ ಎಂದು ಮೀನುಗಾರರ ಸೇವಾ ಸಮಿತಿ ಅಧ್ಯಕ್ಷ ಮೋಹನ ಖಾರ್ವಿ ಆತಂಕ ವ್ಯಕ್ತ ಪಡಿಸಿದ್ದಾರೆ.
► ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ – ಮುನ್ನೆಚ್ಚರಿಕೆ ವಹಿಸಲು ಸೂಚನೆ – https://kundapraa.com/?p=48143 .
ಮರುಕಳಿಸುತ್ತಿರುವ ಕೊರೆತ: ಹೊರಬಂದರು ಕಾಮಗಾರಿಯ ಬಳಿಕ ಮರವಂತೆಯ ಈ ಪ್ರದೇಶದಲ್ಲಿ ಹುಣ್ಣಿಮೆ, ಅಮಾವಾಸ್ಯೆಯ ವೇಳೆ ಬೇಸಿಗೆಯಲ್ಲೂ ಕೊರೆತ ಸಂಭವಿಸುತ್ತಿದೆ. ಅಷ್ಟಷ್ಟಾಗಿ ನಡೆದ ಕೊರೆತದಿಂದ ಇಲ್ಲಿನ ಹತ್ತಾರು ಮೀಟರ್ ಅಗಲದ ಪ್ರದೇಶವನ್ನು ಸಮುದ್ರ ಕಬಳಿಸಿದೆ. ಇದನ್ನು ತಡೆಯಲು ಸಮೀಪದ ಮಾರಸ್ವಾಮಿಯಲ್ಲಿ ಹೆದ್ದಾರಿ ರಕ್ಷಣೆಗೆ ನಿರ್ಮಿಸಿರುವ ಸುಸ್ಥಿರ ಕಡಲತೀರ ನಿರ್ವಹಣಾ ಯೋಜನೆ ಮಾದರಿಯ ಅಲೆತಡೆಗಳನ್ನು ನಿರ್ಮಿಸಬೇಕು ಎಂದು ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮೇಲಿಂದಮೇಲೆ ಮನವಿ ಸಲ್ಲಿಸಲಾಗಿದೆ. ಈಗಲೂ ಇಲ್ಲಿನ ಸ್ಥಿತಿಯ ವೀಡಿಯೊಗಳನ್ನು ಜಿಲ್ಲಾಧಿಕಾರಿಗಳಿಗೆ, ಶಾಸಕರಿಗೆ, ಎಂಜಿನಿಯರ್‌ಗಳಿಗೆ ಕಳುಹಿಸುತ್ತಲೇ ಇದ್ದೇವೆ. ಯಾವುದೂ ಫಲ ನೀಡಿಲ್ಲ ಎಂದು ಕೆ. ಎಂ. ಸುದರ್ಶನ ಖಾರ್ವಿ ಅಳಲು ತೋಡಿಕೊಳ್ಳುತ್ತಾರೆ. ದಾಸಿ ಲಕ್ಷ್ಮಣ ಖಾರ್ವಿ, ಬೇಡು ಶೀನ ಖಾರ್ವಿ, ಎಂ. ಎಸ್. ಕೆ. ಮರ್ಲ ಖಾರ್ವಿ, ಬೀದಿ ಮಂಜಖಾರ್ವಿ, ಗೋವೆಕನ್ನಮನೆ ಶಂಕರ ಖಾರ್ವಿ, ಕೆ. ಎಂ. ಸುದರ್ಶನ ಖಾರ್ವಿ, ಕೆ. ಎಂ. ಶ್ರೀನಿವಾಸ ಖಾರ್ವಿ, ಕೆ. ಎಂ. ರಾಜು ಖಾರ್ವಿ, ಬಡ್ಕನ ನಾರಾಯಣ ಖಾರ್ವಿ, ಬಡ್ಕನ ಅಶೋಕ ಖಾರ್ವಿ ಅವರಿಗೆ ಸೇರಿದ್ದ ೩೩ ತೆಂಗಿನ ಮರಗಳು ಉರುಳಿಹೋಗಿವೆ. ಇನ್ನಷ್ಟು ಉರುಳುವ ಹಂತದಲ್ಲಿವೆ ಎನ್ನುತ್ತಾರೆ ಭೂಪ್ರದೇಶ, ಮರ ಕಳೆದುಕೊಂಡ ನಿವಾಸಿಗಳು.
ಒಮ್ಮೆ ಆರಂಭವಾದ ಸಮುದ್ರದ ಅಬ್ಬರ ಎರಡು, ಮೂರು ದಿನ ಮುಂದುವರಿಯುತ್ತದೆ. ಅದರ ನಡುವೆ 14ರಂದು ಅರಬಿ ಸಮುದ್ರದಲ್ಲಿ ’ತೌಕ್ತೇ’ ಚಂಡಮಾರುತ ರೂಪುಗೊಂಡು, 20ರ ವರೆಗೆ ಪ್ರಭಾವ ಬೀರಲಿದೆ ಎಂದು ಮುನ್ನಚ್ಚರಿಕೆ ನೀಡಲಾಗಿದೆ. ಅದೇನಾದರೂ ಇಲ್ಲಿ ಪ್ರಬಲವಾದರೆ ದೊಡ್ಡ ಅನಾಹುತ ಕಾದಿದೆ. – ಮೀನುಗಾರ ಮುಖಂಡ. ಪಕ್ಕುಮನೆ ಚಂದ್ರ ಖಾರ್ವಿ