ಹಿಂದೂ ಸಂಪ್ರದಾಯದಂತೆ ಶ್ರಾವಣ ಮಾಸದ ಹುಣ್ಣಿಮೆಯಂದು ಯಜುರ್ವೇದ ಉಪಕರ್ಮವನ್ನು(ನೂಲು ಹುಣ್ಣಿಮೆ) ಚತುರ್ದಶಿಯಂದು ಋಗ್ವೇದ ಉಪಕರ್ಮವನ್ನು ಆಚರಿಸಲಾಗುತ್ತದೆ. ಯಜುರ್ವೇದ ಉಪಕರ್ಮದಂದು ರಕ್ಷಾಬಂಧನವನ್ನು ಆಚರಿಸಲಾಗುತ್ತದೆ.
ರಕ್ಷಾ ಬಂಧನಕ್ಕೊಂದು ಪೌರಾಣಿವಾದ ಹಿನ್ನೆಲೆ ಇದೆ. ಅಂದು ಇಂದ್ರನು ಯುದ್ದದಲ್ಲಿ ರಾಕ್ಷಸರ ಜೊತೆ ಸೋಲುವ ಕ್ಷಣ ಬಂದಾಗ ಆತ ಬೃಹಸ್ಮತಿಯ ಸಲಹೆ ಮೇರೆಗೆ ರೇಷ್ಮೆ ದಾರವನ್ನು ಇಂದ್ರಾಣಿಯು ಇಂದ್ರನ ಕೈಗೆ ಕಟ್ಟುತ್ತಾಳೆ. ಇದರ ಪರಿಣಾಮವೂ ಏನೋ ಇಂದ್ರ ಆ ಯುದ್ಧದಲ್ಲಿ ಗೆಲ್ಲುತ್ತಾನೆ. ಹಾಗಾಗಿಯೇ ಆ ದಿನವನ್ನು ರಕ್ಷಾ ಬಂಧನ ಎಂದು ಕರೆಯಲಾಯಿತೆಂಬ ಕಥೆ ಪ್ರಚಲಿತದಲ್ಲಿದೆ.
ಉತ್ತರ ಭಾರತಕ್ಕೆ ಮಾತ್ರ ಸೀಮಿತವಾಗಿದ್ದ ರಾಖಿ ಹಬ್ಬ ಇಂದು ಭಾರತದಾದ್ಯಂತ ಹರಡಿದೆ. ಜಾತಿ ಭೇದವಿಲ್ಲದೇ ಎಲ್ಲರೂ ಸಂಭ್ರಮಿಸುತ್ತಾರೆ. ಮಾರುಕಟ್ಟೆಯಲ್ಲಿ ತಿಂಗಳುಗಳ ಹಿಂದೆ ಬಂದ ವಿಧ ವಿಧದ ರಾಖಿಗಳನ್ನು ಖರೀದಿಸಿ ಬಂದಿದ್ದಾರೆ ಅಕ್ಕ-ತಂಗಿಯರು.
ರಕ್ಷಾ ಬಂಧನ ರಕ್ಷೆ (ರಕ್ಷಣೆ) ಹಾಗೂ ಬಂಧನ (ಸಂಬಂಧ) ಎಂಬ ಎರಡು ಪದಗಳಿಂದ ಕೂಡಿದೆ. ಖಂಡಿತವಾಗಿಯೂ ರಕ್ಷಬಂಧನ ಎಂಬುದು ತಂಗಿಗೆ ಅಣ್ಣನೆಡೆಗಿನ ಅಕ್ಕರೆಯನ್ನು, ಅಣ್ಣನಿಗೆ ತಂಗಿಯೆಡೆಗಿನ ಕಾಳಜಿಯನ್ನು ಹೊರಹಾಕುವ, ನವಿರಾದ ಭಾವನೆಗಳನ್ನು ಗಟ್ಟಿಗೊಳಿಸುವ ದಿನ. ಸಮಾಜದ ದುಷ್ಟಶಕ್ತಿಗಳಿಂದ ತನ್ನನ್ನು ರಕ್ಷಿಸೆಂದು ಸಹೋದರಿಯು, ಸಹೋದರನಿಗೆ ರಾಖಿ ಕಟ್ಟುತ್ತಾಳೆ. ಪ್ರತಿಯೊಬ್ಬ ಸಹೋದರನೂ ಈ ಸಮಯದಲ್ಲಿ ಸಹೋದರಿಯೆಡೆಗಿನ ತನ್ನ ಭ್ರಾತತ್ವ ಪ್ರೇಮವನ್ನು ಉಜ್ವಲಗೊಳಿಸಬೇಕೆಂಬುದು ರಕ್ಷಾ ಬಂಧನದ ನೀತಿಯಾಗಿದೆ. ಆತನ ಅಭಿವೃದ್ಧಿಗೆ ಹಾರೈಸುವ ಅಕ್ಕ-ತಂಗಿಯರು ರಾಖಿ ಕಟ್ಟಿದ ಬಳಿಕ ಉಡುಗೊರೆ ಪಡೆದು, ಸಿಹಿ ವಿನಿಮಯ ಮಾಡಿಕೊಂಡು ಸಂಭ್ರಮಿಸುವುದು ರೂಡಿಯಾಗಿದೆ.
ತಂಗಿ ಕಟ್ಟುವ ರಾಖಿಗೆ ಕೈಯೊಡ್ಡಿ ಸಂಭ್ರಮಿಸುತ್ತಿರುವ; ದೂರದಲ್ಲಿರುವ ತಂಗಿ ಕಳಿಸುವ ರಾಖಿಗಾಗಿ ಹಂಬಲಿಸುತ್ತಿರುವ; ಅಣ್ಣ ಕೊಡಬಹುದಾದ ಉಡುಗೊರೆಗಾಗಿ ಕಾಯುತ್ತಿರುವ; ಸಂತಸದ ಕ್ಷಣಗಳನ್ನು ಕಣ್ತುಂಬಿಕೊಳ್ಳುತ್ತಿರುವ ಎಲ್ಲರಿಗೂ ಕುಂದಾಪ್ರ ಡಾಟ್ ಕಾಂ ಕಡೆಯಿಂದ ರಕ್ಷಾ ಬಂಧನ ಹಾಗೂ ನೂಲು ಹುಣ್ಣಿಮೆಯ ಶುಭಾಶಯಗಳು.