ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ರಾಜ್ಯ ಸರಕಾರದಿಂದ ಬಡವರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಅರ್ಹರಾಗಿದ್ದು ಯಾರಿಗಾದರೂ ಬಿಪಿಎಲ್ ಕಾರ್ಡ್ ತಪ್ಪಿ ಹೋಗಿದ್ದರೆ ಹೊಸದಾಗಿ ಅರ್ಜಿ ಪಡೆದುಕೊಂಡು ಬಿಪಿಎಲ್ ಕಾರ್ಡ್ ನೀಡಲಾಗುತ್ತದೆ ಎಂದು ರಾಜ್ಯದ ಉಪಮುಖ್ಯಮಂತ್ರಿ, ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಅವರು ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಗೆ ಗುರುವಾರ ಪತ್ನಿ ಸಮೇತ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಚುನಾವಣೆ ಪೂರ್ವದಲ್ಲಿ ದೇವರಲ್ಲಿ ಪ್ರಾರ್ಥಿಸಿಕೊಂಡಿದ್ದೆ. ಅದರಂತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಗ್ಯಾರೆಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ಹಾಗಾಗಿ ತಾಯಿ ಮೂಕಾಂಬಿಕೆಗೆ ಪೂಜೆ ಸಲ್ಲಿಸಲು ಬಂದಿರುವುದಾಗಿ ತಿಳಿಸಿದರು. ಇದೇ ವೇಳೆ ಗ್ಯಾರೆಂಟಿ ಯೋಜನೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದರು.
ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡುವ ನಬಾರ್ಡ್ ಸಾಲದ ಪೈಕಿ ಶೇ 58ನ್ನು ಕಡಿತಗೊಳಿಸಲು ತೀರ್ಮಾನಿಸಿರುವುದು ಖಂಡನೀಯ. ರಾಜ್ಯಕ್ಕೆ ಮೊದಲಿನಿಂದ ಅನ್ಯಾಯ ನಡೆಯುತ್ತಲೇ ಇದೆ. ನಂದಿನಿ ಹಾಲಿನ ಮಾರುಕಟ್ಟೆ ಬಗ್ಗೆ ದೆಹಲಿಗೆ ಹೋಗಿದ್ದು, ಇದೇ ಸಂದರ್ಭ ಹಣಕಾಸು ಸಚಿವರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದರು.
ದೇಶದ ವಿಧಾನಸಭೆಗಳ ಚುನಾವಣೆ ಬಗ್ಗೆ ಸಮೀಕ್ಷೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕರ್ನಾಟಕದಲ್ಲಿಯೂ ಸಮೀಕ್ಷೆ ನಡೆದಿತ್ತು. ಆದರೆ ಅದು ತಲೆಕೆಳಗಾಗಿದೆ. ಹಾಗಾಗಿ ಚುನಾವಣಾ ಸಮೀಕ್ಷೆ ಬಗ್ಗೆ ನಂಬಿಕೆಯಿಲ್ಲ. ಎಲ್ಲೆಡೆ ಐಎನ್ಡಿಐಎ ಜಯಭೇರಿ ಬಾರಿಸುತ್ತದೆ ಎಂದ ಅವರು ರಾಜ್ಯದ ಉಪಚುನಾವಣೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಪ್ರಯತ್ನವನ್ನು ನಾವು ಪ್ರಾಮಾಣಿಕವಾಗಿ ಮಾಡಿದ್ದೇವೆ. ಉಳಿದದ್ದು ದೇವರಿಗೆ ಬಿಟ್ಟಿದ್ದೇವೆ ಎಂದರು. ಕೊಲ್ಲೂರು ಆಡಳಿತ ಮಂಡಳಿಯಲ್ಲಿ ಮೂಲ ಕಾಂಗ್ರೆಸ್ ಗೆ ಮಣೆ ಹಾಕಿಲ್ಲ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆಶಿ, ಚುನಾವಣಾ ಸಂದರ್ಭದಲ್ಲಿ ನೀಡಿದ ಮಾತಿನಂತೆ ನಡೆದುಕೊಂಡಿದ್ದೇವೆ. ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ ಎಂದರು.
ನಕ್ಸಲ್ ನಾಯಕ ವಿಕ್ರಂ ಗೌಡ ಹತ್ಯೆ ಬಗ್ಗೆ ಪ್ರತಿಕ್ರಿಯಿಸಿದ ಶಿವಕುಮಾರ್, ಪೊಲೀಸರ ಕೆಲಸ ಪೊಲೀಸರು ಮಾಡಿದ್ದಾರೆ. ಗೃಹ ಸಚಿವ ಪರಮೇಶ್ವರ್ ಅವರ ಕೆಲಸ ಮಾಡುತ್ತಿದ್ದಾರೆ. ಪೊಲೀಸರು ನಮಗೆ ರಕ್ಷಣೆ ಕೊಡಬೇಕು. ಈ ಬಗ್ಗೆ ಹೆಚ್ಚೇನೂ ಹೇಳುವುದಿಲ್ಲ ಎಂದರು.
ಈ ವೇಳೆ ಮೀನುಗಾರಿಕಾ ಸಚಿವ ಮಾಂಕಾಳ್ ವೈದ್ಯ, ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಎಸ್ಪಿ ಕೆ ಅರುಣ್ ಕುಮಾರ್, ಮಾಜಿ ಶಾಸಕ ಕೆ ಗೋಪಾಲ ಪೂಜಾರಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಸ್. ರಾಜು ಪೂಜಾರಿ, ಬೈಂದೂರು ಗ್ಯಾರೆಂಟಿ ಯೋಜನೆ ಅಧ್ಯಕ್ಷ ಮೋಹನ್ ಪೂಜಾರಿ, ಕಾಂಗ್ರೆಸ್ ಮುಖಂಡರಾದ ದಿನೇಶ್ ಹೆಗ್ಡೆ ಮೊಳಹಳ್ಳಿ, ಪ್ರಸಾದ್ ಕಾಂಚನ್, ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ರಾಜೇಶ್ ಕಾರಂತ್, ಸುರೇಂದ್ರ ಶೆಟ್ಟಿ ಮೊದಲಾದವರು ಇದ್ದರು.