ಕುಂದಾಪುರ: ತಾಲೂಕಿನ ಹಳ್ಳಿಹೊಳೆ ಗ್ರಾಮ ಪಂಚಾಯತ್‌ನ ಅಭಿವೃದ್ಧಿ ಅಧಿಕಾರಿಯ ನಿರ್ಲಕ್ಷ್ಯದಿಂದಾಗಿ, ರಾಷ್ಟ್ರಧ್ವಜ ರಾತ್ರಿ ತನಕ ಹಾರಾಡಿದ ಘಟನೆ ನಡೆದಿದೆ.
ರಾತ್ರಿಯಾದರೂ ರಾಷ್ಟ್ರಧ್ವಜ ಕೆಳಗಿಳಿಸದ್ದನ್ನು ಕಂಡ ಸ್ಥಳೀಯರು, ಗ್ರಾ.ಪಂ. ಸದಸ್ಯರಿಗೆ, ತಾ.ಪಂ. ಕಾರ್ಯನಿರ್ವಾಣಾಧಿಕಾರಿ ಹಾಗೂ ಶಂಕರನಾರಾಯಣದ ಪೊಲೀಸರಿಗೆ ಮಾಹಿತಿ ನೀಡಿದರು. ಕೂಡಲೇ ಗ್ರಾ.ಪಂ. ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶಿಲಿಸಿದರು. ತಾ.ಪಂ. ಕಾರ್ಯನಿರ್ವಾಣಾಧಿಕಾರಿ ದೂರವಾಣಿಯ ಮೂಲಕ ಅಭಿವೃದ್ಧಿ ಅಧಿಕಾರಿ ಸುದರ್ಶನ್ ಅವರನ್ನು ಸಂಪರ್ಕಿಸಿ, ಕೂಡಲೇ ಧ್ವಜವನ್ನು ಕೆಳಗಿಳಿಸುವಂತೆ ಆದೇಶಿಸಿದರು.
ಅಭಿವೃದ್ಧಿ ಅಧಿಕಾರಿ ಸುದರ್ಶನ್ ಅವರು ಸುಮಾರು 7.30ರ ವೇಳೆಗೆ ಗ್ರಾ.ಪಂ.ಗೆ ಆಗಮಿಸಿದರು. ಸ್ಥಳದಲ್ಲಿ ಉಪಸ್ಥಿತರಿದ್ದ ಗ್ರಾ.ಪಂ. ಸದಸ್ಯರಾದ ಮಾಧವ ಶೆಣೈ, ದಿನೇಶ್ ಯಡಿಯಾಳ, ಶಿವರಾಮ ಪೂಜಾರಿ, ರಾಘವೇಂದ್ರ ನಾಯ್ಕ, ಶ್ರೀಕರ ನಾಯ್ಕ, ಮಾಜಿ ಅಧ್ಯಕ್ಷ ರಾಮ ನಾಯ್ಕ, ಮುಖಂಡರಾದ ಪ್ರಭಾಕರ ನಾಯ್ಕ, ಉಮೇಶ್ ನಾಯ್ಕ ಅವರು ಅಭಿವೃದ್ಧಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಅನಂತರ ಧ್ವಜವನ್ನು ಕೆಳಗಿಳಿಸಿದರು.
ಕುಂದಾಪುರ ತಾ.ಪಂ. ಕಾರ್ಯನಿರ್ವಾಣಾಧಿಕಾರಿ ಎನ್. ನಾರಾಯಣ ಸ್ವಾಮಿ ಶುಕ್ರವಾರ ಗ್ರಾ.ಪಂ.ಗೆ ಭೇಟಿ ನೀಡಿ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗೆ ಶೋಕಾಸ್ ನೋಟಿಸ್ ನೀಡಿರುವುದಾಗಿ ಹೇಳಿದರು. ಈ ಸಂದರ್ಭ ತಾ.ಪಂ. ಸದಸ್ಯೆ ಹೇಮಾ ಆರ್. ಪೂಜಾರಿ, ಗ್ರಾ.ಪಂ. ಅಧ್ಯಕ್ಷೆ ಭಾಗೀರಥಿ ಮೊದಲಾದವರು ಉಪಸ್ಥಿತರಿದರು.