ಕುಂದಾಪುರ: ಮರವಂತೆ ಸರ್ಕಾರಿ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಬೈಂದೂರು ವಲಯ ಮಟ್ಟದ ಪ್ರೌಢಶಾಲೆಗಳ ಬಾಲಕ, ಬಾಲಕಿಯರ ಕಬಡ್ಡಿ ಪಂದ್ಯದಲ್ಲಿ ಶಿರೂರು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ತಂಡ ಮತ್ತು ಕೊಲ್ಲೂರು ಮೂಕಾಂಬಿಕಾ ಪ್ರೌಢಶಾಲೆಯ ತಂಡಗಳು ಮೊದಲ ಸ್ಥಾನ ಗಳಿಸಿದುವು. ಬಾಲಕರ ವಿಭಾಗದಲ್ಲಿ ಶಿರೂರು ತಂಡದ ಎದುರು 36 ಮತ್ತು 28ಅಂಕಗಳ ಅಂತರದಿಂದ ಸೋತ ಗುಜ್ಜಾಡಿ ಸರಕಾರಿ ಪ್ರೌಢಶಾಲೆಯ ತಂಡ ಮತ್ತು ಬಾಲಕಿಯರ ವಿಭಾಗದಲ್ಲಿ ಕೊಲ್ಲೂರು ತಂಡದ ಎದುರು 37 ಮತ್ತು 17 ಅಂಕಗಳ ಅಂತರದಿಂದ ಸೋತ ಆಲೂರು ಸರಕಾರಿ ಪ್ರೌಢಶಾಲೆಯ ತಂಡ ದ್ವಿತೀಯ ಸ್ಥಾನ ಗಳಿಸಿದುವು. ಬಾಲಕರ ವಿಭಾಗದಲ್ಲಿ 14 ಮತ್ತು ಬಾಲಕಿಯರ ವಿಭಾಗದಲ್ಲಿ 9 ತಂಡಗಳು ಸ್ಪರ್ಧೆಯಲ್ಲಿ ಸೆಣಸಿದ್ದುವು.