ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಂಗಳೂರು: ರಾಜ್ಯದಲ್ಲಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ಇಲಾಖೆಯ ಮೂಲಕ ಹಿಂದೂ ಧರ್ಮವನ್ನು ಹೊರತುಪಡಿಸಿ ಅನ್ಯ ಧರ್ಮೀಯ ಪ್ರಾರ್ಥನಾ ಮಂದಿರಗಳಿಗೆ ತಸ್ತೀಕ್ ಬಿಡುಗಡೆ ಮಾಡುತ್ತಿರುವುದನ್ನು ತಡೆಹಿಡಿಯುವಂತೆ ರಾಜ್ಯ ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಇಲಾಖಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಆಯುಕ್ತರಿಗೆ ಸೂಚಿಸಿದ್ದಾರೆ.
ರಾಜ್ಯದಲ್ಲಿ 34,500 ಹಿಂದೂ ದೇವಸ್ಥಾನಗಳಿಗೆ ತಸ್ತೀಕ್ ನೀಡಲಾಗುತ್ತಿದ್ದು, ಸುಮಾರು 133 ಕೋಟಿ ರೂಪಾಯಿ ಸರಕಾರ ವಾರ್ಷಿಕ ಅನುದಾನ ಹಂಚುತ್ತಿದೆ. ಈ ಪೈಕಿ ಸುಮಾರು 764 ಅನ್ಯ ಧರ್ಮೀಯ ಪ್ರಾರ್ಥನಾ ಮಂದಿರಗಳಿಗೆ ಕೆಲವು ವರ್ಷಗಳಿಂದ ಇತರ ಧರ್ಮದ ಪ್ರಾರ್ಥನಾ ಮಂದಿರಗಳಿಗೆ ತಸ್ತೀಕ್ ರೂಪದಲ್ಲಿ ತಲುಪುತ್ತಿದೆ. ಅದನ್ನು ತಡೆಹಿಡಿಯಲು ಸೂಚಿಸಲಾಗಿದೆ. ಇತರೆ ಯಾವುದೇ ಧರ್ಮದ ಧಾರ್ಮಿಕ ಕೇಂದ್ರಗಳಿಗೆ ಹಣದ ಅವಶ್ಯಕತೆಯಿದ್ದಲ್ಲಿ, ಆಯಾಯ ಇಲಾಖೆಯ ಜವಾಬ್ದಾರಿ ಹಾಗೂ ಆಯಾ ಇಲಾಖೆಯ ಹಣ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲು ಸೂಚಿಸಲಾಗುವುದು ಎಂದವರು ತಿಳಿಸಿದ್ದಾರೆ.
ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ಇಲಾಖೆಯ ಮೂಲಕ ತಸ್ತೀಕ್ ರೂಪದಲ್ಲಿ ಇತರೆ ಧರ್ಮದ ಪ್ರಾರ್ಥನಾ ಮಂದಿರಗಳಿಗೆ ಹಣ ಬಿಡುಗಡೆಯಾಗುತ್ತಿರುವ ಬಗ್ಗೆ ಹಿಂದೂ ಧಾರ್ಮಿಕ ಮುಖಂಡರಿಂದ ಹಲವು ಸಮಯದಿಂದ ಆಕ್ಷೇಪ ವ್ಯಕ್ತವಾಗುತ್ತಿತ್ತು. ಹಿಂದೂ ಧಾರ್ಮಿಕ ದತ್ತಿ ಕಾಯಿದೆಯಲ್ಲಿ ಹಿಂದೂ ಧಾರ್ಮಿಕ ಸಂಸ್ಥೆಗೆ ಮಾತ್ರವೇ ಹಣ ಬಳಸಿಕೊಳ್ಳಬಹುದು ಎಂದು ಸ್ಪಷ್ಟವಾಗಿ ಉಲ್ಲೇಕಿಸಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಬೇರೆ ಪ್ರಾರ್ಥನಾ ಮಂದಿರಗಳಿಗೆ ತಸ್ತಿಕ್ ಬೇಡಿಕೆ ಬಂದರೆ ಸಂಬಂಧಿಸಿದ ಇಲಾಖೆಯಿಂದ ಹಣ ನೀಡಬಹುದು ಎಂದು ಶಿಪಾರಸ್ಸು ಮಾಡಲಾಗಿದೆ. – ಕೋಟ ಶ್ರೀನಿವಾಸ ಪೂಜಾರಿ, ಸಚಿವರು