ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪ್ರಾಕೃತಿಕ ವಿಕೋಪ ತಡೆ, ಮೀನುಗಳ ಸಂತಾನೋತ್ಪತ್ತಿ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಯ ದೃಷ್ಟಿಯಿಂದ ಕಾಂಡ್ಲಾವನ ಬೆಳೆಸುವುದು ಹಾಗೂ ಸಂರಕ್ಷಣೆಯ ಬಗ್ಗೆ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಅರಣ್ಯ ಸಚಿವ ಅರವಿಂದ ಲಿಂಬಾವಳಿ ಹೇಳಿದರು.
ಅವರು ಕುಂದಾಪುರ ಪಂಚಗಂಗಾವಳಿ ಹಿನ್ನಿರು ಭಾಗದಲ್ಲಿರುವ ಕಾಂಡ್ಲಾವನ ವೀಕ್ಷಣೆ ಮಾಡಿದ ಬಳಿಕ ಮಾತನಾಡಿ ಕರಾವಳಿಯಾದ್ಯಂತ ಕಾಂಡ್ಲಾವನ ಬೆಳೆಸಲು ಅರಣ್ಯ ಇಲಾಖೆಯಿಂದ ಚಿಂತನೆ ನಡೆಸಲಾಗಿದೆ. ಕಾಂಡ್ಲಾವನ ಹೆಚ್ಚಿದಷ್ಟು ಕರಾವಳಿಯಲ್ಲಿ ಸೈಕ್ಲೋನ್ನಂತಹ ಪ್ರಕೃತಿವಿಕೋಪ ತಡೆಯಲು ಸಾಧ್ಯವಿದೆ. ಕುಂದಾಪುರದ ಪ್ರಸಿದ್ಧ ಕಾಣೆ ಮೀನು ಈ ಪ್ರದೇಶದಲ್ಲಿಯೇ ಸಂತಾನೋತ್ಪತ್ತಿ ಮಾಡುತ್ತದೆ ಅಲ್ಲದೇ ಇಕೋ ಟೂರಿಸಂಗೆ ಪ್ರಶಸ್ತ ಸ್ಥಳವಾಗಿದೆ. ಇದರಿಂದ ಬರುವ ಆದಾಯವನ್ನು ಕಾಂಡ್ಲಾ ಅರಣ್ಯ ಬೆಳೆಸಲು ವಿನಿಯೋಗಿಸುವ ಯೋಜನೆ ಸಿದ್ಧಪಡಿಸಲು ಸೂಚಿಸಲಾಗಿದೆ.
ಈ ಸಂದರ್ಭ ಕಾಂಡ್ಲಾವನ ಪರಿಚಯದ ಕಿರುಹೊತ್ತಿಗೆಯನ್ನು ಸಚಿವರು ಬಿಡುಗಡೆಗೊಳಿಸಿದರು. ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಗೂ ಬೈಂದೂರು ಶಾಸಕರಾದ ಬಿ. ಎಂ. ಸುಕುಮಾರ್ ಶೆಟ್ಟಿ, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಿಲ್ಲೋ ಟಾಗೋ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ನೇತಳ್ಕರ್, ಕುಂದಾಪುರ ಉಪವಲಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ, ಕುಂದಾಪುರ ಉಪವಿಭಾಗಾಧಿಕಾರಿ ಕೆ.ರಾಜು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ. ಲೋಹಿತ್, ವಲಯ ಅರಣ್ಯಾಧಿಕಾರಿ ಪ್ರಭಾಕರ್ ಕುಲಾಲ್, ಬೈಂದೂರು ವಲಯ ಅರಣ್ಯಾಧಿಕಾರಿ ಕಿರಣ್ ಬಾಬು, ಪುರಸಭಾ ಅಧ್ಯಕ್ಷೆ ವಿಣಾ ಭಾಸ್ಕರ್, ಉಪಾಧ್ಯಕ್ಷ ಸಂದೀಪ್ ಖಾರ್ವಿ, ಬಿಜೆಪಿ ಕ್ಷೇತ್ರಾಧ್ಯಕ್ಷ ಶಂಕರ್ ಅಂಕದಕಟ್ಟೆ, ಮುಖಂಡರಾದ ವಿಜಯ ಎಸ್. ಪೂಜಾರಿ, ಸುರೇಶ್ ಬೀಜಾಡಿ, ಸತೀಶ್ ಪೂಜಾರಿ ವಕ್ವಾಡಿ, ಮೋಹನದಾಸ್ ಶೆಣೈ, ಸಂತೋಷ್ ಶೆಟ್ಟಿ, ಶ್ವೇತಾ, ದಿವಾಕರ ಕಡ್ಗಿಮನೆ, ಸುಧೀರ್ ಕೆ.ಎಸ್., ಸುರೇಂದ್ರ ಕಾಂಚನ್, ಅವಿನಾಶ್ ಉಳ್ತೂರು ಮೊದಲಾದರು ಇದ್ದರು.