ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ವತಿಯಿಂದ ‘ಆನಿಮೇಷನ್ ವೃತ್ತಿ ಅವಕಾಶಗಳು ಹಾಗೂ ನಿರೀಕ್ಷೆಗಳು’ ಕುರಿತು ವೆಬಿನಾರ್ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಕಾಲೇಜಿನ ಹಳೆಯ ವಿದ್ಯಾರ್ಥಿನಿ ಪ್ರಸ್ತುತ ಟೆಕ್ನಿಕಲರ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಪ್ರೊಡಕ್ಷನ್ ಕೊಆರ್ಡಿನೇಟರ್ ಆಗಿ ಕಾರ‍್ಯ ನಿರ್ವಹಿಸುತ್ತಿರುವ ನಮ್ರತಾ ಡಿ.ಪಿ. ಭಾಗವಹಿಸಿದ್ದರು. ಆನಿಮೇಷನ್ ಮತ್ತು ವಿಎಫ್‌ಎಕ್ಸ್ ಕ್ಷೇತ್ರದ ಬಹುಮುಖಿ ಆಯಾಮಗಳ ಬಗ್ಗೆ ತಿಳಿಸಿದ ಅವರು, ‘ಆನಿಮೇಷನ್ ಕ್ಷೇತ್ರವು ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಚಲಿತವಾದಂತಹ ಕ್ಷೇತ್ರ. ಇದಕ್ಕಿರುವ ವಿಶಾಲ ವ್ಯಾಪ್ತಿ, ಪ್ರಾಯೋಗಿಕ ಅಳವಡಿಕೆ ಹಾಗೂ ಸೃಜನಾತ್ಮಕ ಗುಣಗಳಿಂದಾಗಿ ಸಿನಿಮಾ, ಜಾಹೀರಾತು, ಡಾಕ್ಯುಮೆಂಟರಿಯಂತಹ ವೈವಿಧ್ಯಮಯ ಕ್ಷೇತ್ರಗಳಲ್ಲಿ ಇಂದು ಆನಿಮೇಶನ್ ಬಳಕೆಯಾಗುತ್ತಿದೆ. ಗ್ರಾಫಿಕ್ಸ್ ಹಾಗೂ ವಿಷುವಲ್ ಇಫೆಕ್ಟ್ಸ್ ಬಳಕೆಯಿಂದಾಗಿ ಈ ಕ್ಷೇತ್ರಕ್ಕೆ ಹೆಚ್ಚಿನ ಬೇಡಿಕೆಯಿದೆ’ ಎಂದರು.
ಕ್ರಿಯೇಟಿವ್ ಆಲೋಚನೆಗಳಿರುವ ವಿದ್ಯಾರ್ಥಿಗಳು ಆನಿಮೇಷನ್ ಕೋರ್ಸ್‌ಗಳನ್ನು ಆಯ್ದುಕೊಂಡು, ಹಾಲಿವುಡ್ ಸೇರಿದಂತೆ ಇತರ ಸಿನಿಮಾ ಮತ್ತು ಪ್ರೊಡಕ್ಷನ್ ವಿಭಾಗಗಳಲ್ಲಿ ಉದ್ಯೋಗ ಪಡೆಯಬಹುದು. ಗ್ರಾಫಿಕ್ಸ್ ಹಾಗೂ ವಿಷುವಲ್ ಇಫೆಕ್ಟ್ಸ್ ಕೌಶಲ್ಯ ತಿಳಿದಿರುವ ಅಭ್ಯರ್ಥಿಗಳಿಗೆ ಅಂತರಾಷ್ಟ್ರೀಯ ಸಂಸ್ಥೆಗಳಲ್ಲಿ ಇಂಟರ್ನ್ಶಿಪ್ ಜತೆಗೆ ಆದಾಯ ಗಳಿಸುವ ವಿಪುಲ ಅವಕಾಶಗಳಿವೆ ಎಂದರು.
ನಂತರ ನಡೆದ ಸಂವಾದದಲ್ಲಿ ಸಿನಿಮಾ ನಿರ್ಮಾಣ, ಗ್ರಾಫಿಕ್ಸ್ ಮತ್ತು ಕಲರಿಂಗ್, ಆನಿಮೇಶನ್ ಸಾಫ್ಟ್‌ವೇರ್‌ಗಳು, ಇಂಟರ್ನ್‌ಶಿಪ್ ಅವಕಾಶಗಳ ಬಗ್ಗೆ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಸಂಪನ್ಮೂಲ ವ್ಯಕ್ತಿ ಉತ್ತರಿಸಿದರು. ಜೊತೆಗೆ ತಾವು ಮಾಡಿದ್ದ ಹಲವಾರು ಆನಿಮೇಶನ್ ಪ್ರೊಜೆಕ್ಟ್‌ಗಳನ್ನು ಪ್ರಸ್ತುತಪಡಿಸಿದರು.
ವೆಬಿನಾರ್‌ನಲ್ಲಿ ವಿಭಾಗ ಸಂಯೋಜಕ ಪ್ರಸಾದ್ ಶೆಟ್ಟಿ, ಉಪನ್ಯಾಸಕಿ ಶ್ರೀಗೌರಿ ಜೋಷಿ, ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಹಾಗೂ ಆನಿಮೇಷನ್ ಆಸಕ್ತರು ಭಾಗವಹಿಸಿದ್ದರು.