ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನಾದ್ಯಂತ ಕಳೆದ ಮೂರು ದಿನದಿಂದ ಸುರಿಯತ್ತಿದ್ದ ಮಳೆಗೆ ತಾಲೂಕಿನ ನದಿಗಳ ನೀರು ಏರುತ್ತಿದ್ದು, ಅಲ್ಲಲ್ಲಿ ಮನೆ, ದೇವಸ್ಥಾನಗಳ ಮೇಲೆ ಮರಬಿದ್ದು ನಷ್ಟ ಸಂಭವಿಸಿದೆ.
ಬಸ್ರೂರಿನ ಮಂಕಿ ಗಣಪಯ್ಯ ಗಾಣಿಗ ಎಂಬುವರ ಮನೆ ಮೇಲೆ ಮರ ಉರುಳಿ ಸಾವಿರ ನಷ್ಟ ಸಂಭವಿಸಿದ್ದು, ಮನೆಯಲಿದ್ದ ಗಣಪಯ್ಯ ಗಾಣಿಗ, ವಾರಿಜಾ ಎಂಬವರಿಗೆ ತಲೆಗೆ ಗಂಭೀರ ಗಾಯಗೊಂಡಿದ್ದು ಇಬ್ಬರನ್ನು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ತೆಕ್ಕಟ್ಟೆ ಗ್ರಾಮದಲ್ಲಿ ಇರುವ ದೇವಸ್ಥಾನದ ವಿಶ್ರಾಂತಿ ಕೊಠಡಿ ಮೇಲ್ಮಾಡು ಹಾರಿ ಹೋಗಿದ್ದು, ಘಟ್ಟದಲ್ಲಿ ಮಳೆ ಹೆಚ್ಚಿದ್ದು, ತಾಲೂಕಿನಲ್ಲಿ ಹರಿವ ಸೌಪರ್ಣಿಕಾ, ಚಕ್ರಾ, ವರಾಹಿ, ಕುಬ್ಜ, ಖೇಟಕಿ ನದಿಗಳ ನೀರಿನ ಹರವು ಕೂಡಾ ಹೆಚ್ಚಿದೆ. ನದಿಯಲ್ಲಿ ನೀರು ಹೆಚ್ಚಿದ್ದರಿಂದ ಸಾಲ್ಬುಡ, ಹಡವು, ಬಡಾಕೆರೆ, ಕಟ್ಟು, ಉಪ್ಪಿನಕುದ್ರು ತಗ್ಗು ಪ್ರದೇಶದಕ್ಕೆ ನೆರೆ ಭೀತಿ ಎದುರಾಗಿದೆ. ಮಳೆ ಚುರುಕುಗೊಂಡಿದ್ದರಿಂದ ಯಾಡಾಡಿ ಮತ್ಯಾಡಿ ಗ್ರಾಮದ ಗುಡ್ಡೆಯಂಗಡಿ ಮರ ಬಿದ್ದು ವಾಹನ ಸಂಚಾರಕ್ಕೆ ಸಮಸ್ಯೆಯಾಗಿದ್ದು, ವಿದ್ಯುತ್ ಸಂಪರ್ಕ ವ್ಯತ್ಯಯವಾಯಿತು. ಸ್ಥಳೀಯರು ಮರ ತೆರವು ಮಾಡಿದ್ದಾರೆ.
ಮಾಲಾಡಿ ಬ್ರಹ್ಮಲಿಂಗೇಶ್ವರ ಹಾಗೂ ನಂದಿಕೇಶ್ವರ ಪರಿವಾರ ದೈವಸ್ಥಾನದ ಗುಡಿಯ ವಿಶ್ರಾಂತಿ ಕೊಠಡಿ ತಗಡಿನ ಮಾಡು ಸಂಪೂರ್ಣ ಕಿತ್ತು ಹಾರಿ ಹೋಗಿದೆ. ನಸುಕಿನ ವೇಳೆಯಾದ್ದರಿಂದ ಜನರ ಓಡಾಟವಿಲ್ಲದ ಹಿನ್ನೆಲೆ ಸಾವು-ನೋವು ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ಗ್ರಾಪಂ ಅಧಿಕಾರಿಗಳು, ಜನಪ್ರತಿನಿಧಿಗಳು ಭೇಟಿ ನೀಡಿದ್ದಾರೆ.