ಸೋಮೇಶ್ವರ ಕಡಲತೀರಕ್ಕೆ ತಾಕಿಕೊಂಡಿರುವ ಗುಡ್ಡವೇ ಒತ್ತಿನಣೆ. ಹಲವು ಬಗೆಯ ಔಷದ ಸಸ್ಯಗಳು, ಅಪರೂಪದ ಮರಗಿಡಗಳು ಈ ಭಾಗದಲ್ಲಿದೆ. ಸಮುದ್ರ ಮಟ್ಟದಿಂದ ಸುಮಾರು 200 ಅಡಿ ಎತ್ತರದಲ್ಲಿರುವ ನೇಸರಧಾಮದ ತುದಿಯಿಂದ ಸಮುದ್ರ ವೀಕ್ಷಣೆ ಮಾಡಿದವರಿಗೆ ಸ್ವರ್ಗವೀಕ್ಷಿಸಿದಂತಹ ಅನುಭವ. ಇಲ್ಲಿ ನಿಂತು ಸಮುದ್ರ ನದಿಗಳು ಸೇರುವ ದೃಶ್ಯ, ಸೂರ್ಯಾಸ್ತಮಾನ ಇವೆಲ್ಲವನ್ನೂ ನೋಡುವುದೇ ಮನಮೋಹಕವಾಗಿರುತ್ತದೆ. ಸಮುದ್ರದ ಸೊಬಗು ಸವಿಯಲೆಂದೇ 1996ರಲ್ಲಿ ಒತ್ತಿನಣೆಯಲ್ಲಿ ಅರಣ್ಯ ಇಲಾಖೆ ಕ್ಷಿತಿಜ ನೇಸರಧಾಮವನ್ನು ನಿರ್ಮಿಸಿದೆ. ಎರಡು ಹವಾನಿಯಂತ್ರಿತ ಕಾಟೇಜ್ ಹಾಗೂ ಐದು ಸಾಮಾನ್ಯ ಕಾಟೇಜ್ ಮತ್ತು ಫಲಹಾರ ಮಂದಿರ ನೇಸರಧಾಮದಲ್ಲಿದೆ. ಇಲ್ಲಿಂದ ಕೆಳಗಿಳಿಯಲು ಮೆಟ್ಟಿಲು ವ್ಯವಸ್ಥೆ ಇದ್ದು ರಸ್ತೆಯನ್ನು ದಾಟಿ ಸೋಮೇಶ್ವರ ಕಡಲತೀರಕ್ಕೆ ತೆರಳಬಹುದಾಗಿದೆ. ರಾಷ್ಟ್ರಿಯ ಹೆದ್ದಾರಿಯಿಂದ 2 ಕಿ. ಮೀ. ದೂರದಲ್ಲಿರುವ ಕ್ಷಿತಿಜ ನೇಸರಧಾಮಕ್ಕೆ ತೆರಳಲು ಅರ್ಧ ಕಿ.ಮೀ. ನಷ್ಟು ಡಾಂಬಾರು ರಸ್ತೆಯಿದ್ದು, ಮುಂದೆ ಮಣ್ಣಿನ ರಸ್ತೆಯಲ್ಲಿಯೇ ಸಾಗಬೇಕಾಗಿದೆ. ಅರಣ್ಯ ಇಲಾಖೆಗೆ ಒಳಪಡುವ ಒತ್ತಿನಣೆ ಪ್ರದೇಶದಲ್ಲಿ ಅನೇಕ ಔಷಧಿ ಸಸ್ಯಗಳೂ ಇವೆ.
ಕ್ಷಿತಿಜ ನೇಸರಧಾಮ ಬೈಂದೂರು
