ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮಹಾತ್ಮ ಗಾಂಧಿ ಮಾರ್ಗದಲ್ಲಿ ನಿರ್ಮಿಸಿರುವ ರಸ್ತೆಯ ವೇಗತಡೆಯನ್ನು ತೆಗೆಯಬೇಕು ಎಂದು ಒಂದು ಬಣ ಒತ್ತಾಯಿಸಿದರೆ, ಉಳಿಸಿಕೊಳ್ಳಬೇಕು ಎಂದು ಇನ್ನೊಂದು ತಂಡ ಆಗ್ರಹಿಸಿತು. ಅಭಿವೃದ್ಧಿ ಅಧಿಕಾರಿ ರಿಯಾಜ್ ಅಹಮದ್ ಈ ವೇಗತಡೆಯ ಅಗತ್ಯದ ಬಗ್ಗೆ ಪೊಲೀಸ್ ಮತ್ತು ಸಾರಿಗೆ ಇಲಾಖೆಯ ಅಭಿಪ್ರಾಯ ಪಡೆದು ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಮಜಾಯಿಸಿ ನೀಡಿ ಈ ಕುರಿತಾದ ಬಿಸಿಚರ್ಚೆಯನ್ನು ಮೊಟಕುಗೊಳಿಸಿದರು.
ಮರವಂತೆ ಗ್ರಾಮ ಪಂಚಾಯಿತಿಯಲ್ಲಿ ನಡೆದ ಗ್ರಾಮಸಭೆಯಲ್ಲಿ ಈ ಚರ್ಚೆ ನಡೆಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ ಅಧ್ಯಕ್ಷತೆ ವಹಿಸಿದ್ದರು. ಲೀನಾ ಕ್ರಾಸ್ಟಾ, ಚಂದ್ರ ಉಗ್ರಾಣಿಮನೆ, ಜಿ. ರಾಮಕೃಷ್ಣ ಖಾರ್ವಿ, ಗಣೇಶ ಪೂಜಾರಿ, ಮನ್ಸೂರ್ ಇಬ್ರಾಹಿಂ, ಗ್ರೇಶನ್ ಕ್ರಾಸ್ಟಾ, ಕೆ. ವಿಘ್ನೇಶ್ವರ, ಗಣೇಶ ಮಧ್ಯಸ್ಥ, ಶಂಕರ ಪೂಜಾರಿ, ಶೇಷಗಿರಿ ಆಚಾರ್ಯ, ಕೃಷ್ಣ ಮೊಗವೀರ, ಹರೀಶ ಪೂಜಾರಿ, ಮರವಂತೆ ಪ್ರವಾಹ ಬಾಧಿತ ಗ್ರಾಮವಾಗಿರುವುದರಿಂದ ಈಗಿರುವ ಎರಡು ದೋಣಿಗಳು ಸಾಲವು, ಹೆಚ್ಚುವರಿ ದೋಣಿ ಬೇಕು, ಅನ್ನಿಬೆಸೆಂಟ್ ಮಾರ್ಗದಿಂದ ನದಿತೀರಕ್ಕೆ ರಸ್ತೆ ನಿರ್ಮಿಸಬೇಕು, ನಾರಾಯಣ ಗುರು ಮಾರ್ಗದಲ್ಲಿ ವಿದ್ಯುತ್ ಲೈನ್‌ಗೆ ಅಪಾಯಕಾರಿಯಾಗಿರುವ ದೊಡ್ಡ ಮರಗಳನ್ನು ಕಡಿಯಬೇಕು, ಅನುದಾನದ ವಿವರ ಒದಗಿಸಬೇಕು. ಬೀದಿನಾಯಿಗಳ ಉಪಟಳಕ್ಕೆ ತಡೆಯೊಡ್ಡಬೇಕು, ಪಂಚಾಯಿತಿ ಆವರಣದಲ್ಲಿ ಇಂಟರ್‌ಲಾಕ್ ಅಳವಡಿಸಬೇಕು ಇತ್ಯಾದಿ ಬೇಡಿಕೆಗಳನ್ನು ಮುಂದಿಟ್ಟರು.
ಮಾಜಿ ಅಧ್ಯಕ್ಷ, ಪಂಚಾಯತ್ ರಾಜ್ ಸಂಪನ್ಮೂಲ ವ್ಯಕ್ತಿ ಎಸ್. ಜನಾರ್ದನ ಗ್ರಾಮಸಭೆಯನ್ನು ಹಳೆ ಪದ್ಧತಿಯಲ್ಲಿ ನಡೆಸುವುದನ್ನು ನಿಲ್ಲಿಸಿ, ತಿದ್ದುಪಡಿಯಾಗಿ ಅಸ್ತಿತ್ವಕ್ಕೆ ಬಂದಿರುವ ಗ್ರಾಮಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ ರೀತ್ಯಾ ನಡೆಸಬೇಕು. ಗ್ರಾಮಸಭೆಯ ಪರಮಾಧಿಕಾರ ಆಗಿರುವ ಫಲಾನುಭವಿಗಳ ಆಯ್ಕೆ ಮತ್ತು ವಾರ್ಷಿಕ ಯೋಜನೆಯನ್ನು ಗ್ರಾಮಸಭೆಯಲ್ಲೇ ಅಂತಿಮಗೊಳಿಸಬೇಕು ಎಂದರು.
ಮಾರ್ಗದರ್ಶಿ ಅಧಿಕಾರಿಯಾಗಿದ್ದ ಬೈಂದೂರು ಪಶುವೈದ್ಯಾಧಿಕಾರಿ ಡಾ. ನಾಗರಾಜ ಮಾತನಾಡಿ ಮಾಡಿದ ಸಾಧನೆ ಮತ್ತು ಗಳಿಸಿದ ಪ್ರಶಸ್ತಿಗಳ ಮೂಲಕ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸಲ್ಪಟ್ಟ ಮರವಂತೆ ಗ್ರಾಮ ಪಂಚಾಯಿತಿ ಈ ಪರಂಪರೆಯನ್ನು ಮುಂದುವರಿಸಿ ಇನ್ನಷ್ಟು ಎತ್ತರಕ್ಕೆ ಏರಬೇಕು ಎಂದು ಹೇಳಿದರು.
ವೈದ್ಯಾಧಿಕಾರಿ ಡಾ. ಸನ್ಮಾನ್ ಶೆಟ್ಟಿ, ಶಿಕ್ಷಣ ಸಂಯೋಜಕ ಕರುಣಾಕರ ಶೆಟ್ಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಸಿಂಧುಕುಮಾರಿ, ಉಪ ವಲಯ ಅರಣ್ಯಾಧಿಕಾರಿ ಸದಾಶಿವ, ಮೆಸ್ಕಾಂ ಎಂಜಿನಿಯರ್ ವಿಜಯೇಂದ್ರ, ಕೃಷಿ ಅಧಿಕಾರಿ ಗೋಪಾಲ್ ಇಲಾಖೆಗಳಿಗೆ ಸಂಬಂಧಿಸಿದ ಮಾಹಿತಿ ನೀಡಿದರು.
ರಿಯಾಜ್ ಅಹಮದ್ ಸ್ವಾಗತಿಸಿದರು. ಕರ ಸಂಗ್ರಾಹಕ ಶೇಖರ ಮರವಂತೆ ಹಿಂದಿನ ಸಾಲಿನ ಲೆಕ್ಕಪತ್ರ ಮತ್ತು ಕೈಗೊಂಡ ಕಾಮಗಾರಿಗಳ ವಿವರ ನೀಡಿದರು. ಗಣಕಯಂತ್ರ ನಿರ್ವಾಹಕ ಗುರುರಾಜ್ ವಂದಿಸಿದರು. ಕಾರ್ಯದರ್ಶಿ ದಿನೇಶ ಶೇರುಗಾರ್ ವರದಿ ಮಂಡಿಸಿ ನಿರೂಪಿಸಿದರು. ಉಪಾಧ್ಯಕ್ಷ ಲೋಕೇಶ ಖಾರ್ವಿ, ಸದಸ್ಯರು ಇದ್ದರು.