ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದರೆ: ಯುನೈಟೆಡ್ ನೇಶನ್ಸ್ ಎನ್ವಿರಾನ್ಮೆಂಟ್ ಪ್ರೋಗ್ರಾಮ್ ಹಾಗೂ ಸೆಂಟರ್ ಫಾರ್ ಎನ್ವಿರಾನ್ಮೆಂಟ್ ಎಜ್ಯುಕೇಶನ್ ಜಂಟಿಯಾಗಿ ಭಾರತದಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸುತ್ತಿದ್ದು, ಇದರ ಭಾಗವಾಗಿ ಆಕ್ಟ್ ಟು ರಿಸ್ಟೋರ್’ ಎಂಬ ಆರು ತಿಂಗಳ ಪರಿಸರ ಅಭಿಯಾನವನ್ನು ಆಯೋಜಿಸಿವೆ. ಪರಿಸರ ಸಂಬಂಧೀ ಮಾಹಿತಿ- ಶಿಕ್ಷಣ- ಸಂವಹನ ಅಭಿಯಾನ ಇದಾಗಿದ್ದು, ಇದರ ಭಾಗವಾಗಿ ವಿವಿಧ ಪರಿಸರ ವ್ಯವಸ್ಥೆಗಳ ಬಗ್ಗೆ ಪ್ರತೀ ತಿಂಗಳೂ ವೈಜ್ಞಾನಿಕ ಪೋಸ್ಟರ‍್ಗಳನ್ನು ಬಿಡುಗಡೆಗೊಳಿಸಲಾಗುತ್ತದೆ. ಈ ಅಭಿಯಾನದ ಜುಲೈ ತಿಂಗಳ ಪೋಸ್ಟರ್‌ನಲ್ಲಿ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಿರ್ಮಿಸಲಾಗಿರುವ ಹರೀಶ್ ಭಟ್ ಪಕ್ಷಿವನಕ್ಕೆ ಸ್ಥಾನ ಸಿಕ್ಕಿದೆ.
ಯುನೈಟೆಡ್ ನೇಶನ್ಸ್ ಎನ್ವಿರಾನ್ಮೆಂಟ್ ಪ್ರೋಗ್ರಾಮ್ ಹಾಗೂ ಸೆಂಟರ್ ಫಾರ್ ಎನ್ವಿರಾನ್ಮೆಂಟ್ ಎಜ್ಯುಕೇಶನ್ ಪರಿಸರದ ಕುರಿತು ವಾರ್ಷಿಕ ಹಾಗೂ ದಶಕದ ಅವಧಿಯ ಕಾರ್ಯಗಳನ್ನು ನಡೆಸುತ್ತ ಬಂದಿದೆ. ಪ್ರತಿಬಾರಿಯೂ ವಿವಿಧ ಮುಖ್ಯ ಪರಿಸರ ವಿ?ಯಗಳ ಕುರಿತು ಜಾಗೃತಿ ಕಾರ್ಯಗಳನ್ನು ಮಾಡುತ್ತ ಬಂದಿದ್ದು, ಈ ಬಾರಿಯ ಥೀಮ್ ‘ಇಕೋಸಿಸ್ಟಮ್ ರಿಸ್ಟೋರೇಶನ್’ ಆಗಿದೆ. ಕೃಷಿ ಪರಿಸರ, ಹುಲ್ಲುಗಾವಲುಗಳು, ಪರ್ವತಗಳು, ತೇವಭೂಮಿ, ಸಂರಕ್ಷಿತ ಅಭಯಾರಣ್ಯಗಳು, ಕೆರೆ, ನದಿ ಹಾಗೂ ಕರಾವಳಿ ಪ್ರದೇಶಗಳ ಮೇಲಾಗುತ್ತಿರುವ ದುಷ್ಪರಿಣಾಮಗಳನ್ನು ತಡೆದು ಅವುಗಳನ್ನು ಸಂರಕ್ಷಿಸುವುದು ಈ ವಾರ್ಷಿಕ ಕಾರ್ಯಗಳ ಮುಖ್ಯ ಉದ್ದೇಶವಾಗಿದೆ. ದಶಕದ ಚಟುವಟಿಕೆಗಳು ದೂರದೃಷ್ಟಿಯನ್ನು ಹೊಂದಿದ್ದು, ಪರಿಸರ ವ್ಯವಸ್ಥೆಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವುದು ಅದರ ಉದ್ದೇಶ. ವಾತಾವರಣದ ತೀವ್ರ ಬದಲಾವಣೆಯ ಉಪಶಮನ, ನೀರು ಮತ್ತು ಆಹಾರ ಭದ್ರತೆ, ಬಡತನ ನಿರ್ಮೂಲನೆ, ಆರ್ಥಿಕ ಪ್ರಗತಿ, ಜೀವವೈವಿಧ್ಯತೆಯ ಸಂರಕ್ಷಣೆ ಹೀಗೆ ವಿವಿಧ ವಿಷಯಗಳಿಗೆ ಶಾಶ್ವತ ಪರಿಸರಸ್ನೇಹಿ ಪರಿಹಾರಗಳನ್ನು ನೀಡುವುದು ದಶಕದ ಕಾರ್ಯಗಳ ಧ್ಯೇಯ.
ಇದೆಲ್ಲದರ ಭಾಗವಾಗಿ ಆಕ್ಟ್ ಟು ರಿಸ್ಟೋರ್ ಎಂಬ ಆರು ತಿಂಗಳ ಅಭಿಯಾನವನ್ನು ನಡೆಸಲಾಗುತ್ತಿದ್ದು, ವಿದ್ಯಾರ್ಥಿಗಳು, ಉಪನ್ಯಾಸಕರು, ಯುವ ಸಂಘಟನೆಗಳು, ಎನ್‌ಜಿಓಗಳು ಪತ್ರಕರ್ತರು, ಕಾರ್ಪೋರೇಟ್ ಕಂಪನಿಗಳು ಸೇರಿದಂತೆ ಪರಿಸರ ವ್ಯವಸ್ಥೆಗಳ ಮುಖ್ಯ ಬಳಕೆದಾರರನ್ನು ಒಳಗೊಂಡು ಜಾಗೃತಿ ಕಾರ್ಯಗಳನ್ನು ಮಾಡುವುದು ಇದರ ಮುಖ್ಯ ಉದ್ದೇಶ. ಪ್ರತಿ ತಿಂಗಳೂ ವಿವಿಧ ಪರಿಸರ ವ್ಯವಸ್ಥೆಗಳ ಕುರಿತು ಪೋಸ್ಟರ್ ಮೂಲಕ ಹೆಚ್ಚಿನ ಮಾಹಿತಿಯನ್ನು ಜನರಿಗೆ ನೀಡಿ, ಅದರ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ನಾಶವಾಗುತ್ತಿರುವ ಪರಿಸರ ವ್ಯವಸ್ಥೆಯ ಉಳಿವಿಗಾಗಿ ಮಾಡಿದ ವಿನೂತನ ಪ್ರಯೋಗಗಳು, ಹಾಗೂ ಅದಕ್ಕೆ ಸಂಬಂಧಿಸಿದ ಯಶಸ್ವೀ ಪರಿಸರ ಮಾದರಿಗಳನ್ನು ದೇಶಾದ್ಯಂತ ಈ ಪೋಸ್ಟರ್‌ಗಳ ಮೂಲಕ ಪ್ರಚುರಪಡಿಸಲಾಗುತ್ತದೆ. ಈ ಬಾರಿಯ ಜುಲೈ ತಿಂಗಳ ಪೋಸ್ಟರ್ ಗಾಗಿ ‘ಅರಣ್ಯ ಪರಿಸರ ವ್ಯವಸ್ಥೆ’ ಮುಖ್ಯ ವಿಷಯವಾಗಿತ್ತು. ಇದಕ್ಕೆ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಿರ್ಮಿಸಿರುವ ಹರೀಶ್ ಭಟ್ ಪಕ್ಷಿವನದ ಮಾದರಿ ಪ್ರಯೋಗ ಆಯ್ಕೆಯಾಗಿದೆ. ರಾಷ್ಟ್ರದಾದ್ಯಂತ ನಡೆದ ಹಲವು ವಿನೂತನ ಪ್ರಯೋಗಗಳು ಆಯ್ಕೆ ಸಮಿತಿಯ ಮುಂದೆ ಬಂದಿದ್ದವು. ಸುದೀರ್ಘ ಪರಿಶೀಲನೆಯ ಬಳಿಕ ಆಳ್ವಾಸ್‌ನ ಈ ನೂತನ ಪ್ರಯೋಗ ಆಯ್ಕೆಯಾಗಿ ರಾಷ್ಟ್ರಮಟ್ಟದ ಜಾಗೃತಿ ಪೋಸ್ಟರನಲ್ಲಿ ಸ್ಥಾನ ಪಡೆದಿದೆ ಎಂದು ಸೆಂಟರ್ ಫಾರ್ ಎನ್ವಿರಾನ್ಮೆಂಟ್ ಎಜ್ಯುಕೇಶನ್‌ನ ದಕ್ಷಿಣ ವಲಯದ ಸ್ಟೇಟ್ ಪ್ರೊಜೆಕ್ಟ್ ಕೊಆರ್ಡಿನೇಟರ್ ವ್ರಿಜುಲಾಲ್ ತಿಳಿಸಿದ್ದಾರೆ.