ಕುಂದಾಪುರ: ಪತ್ರಿಕೆಯೊಂದರ ಸಂಪಾದಕನೆಂದು ಹೇಳಿಕೊಂಡ ವ್ಯಕ್ತಿಯೋರ್ವ ಕುಂದಾಪುರದ ವಿಠಲವಾಡಿಯ ಉದ್ಯಮಿ ಗಣೇಶ ಪೂಜಾರಿ ಎಂಬುವವರಿಗೆ ದೂರವಾಣಿ ಕರೆಮಾಡಿ ಹಣದ ಬೇಡಿಕೆಯಿಟ್ಟು ಬೆದರಿಕೆಯೊಡ್ಡಿದ ಘಟನೆ ನಡೆದಿದ್ದು ಈ ಬಗ್ಗೆ ಕುಂದಾಪುರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಘಟನೆಯ ವಿವರ:
‘ಪ್ರಸಿದ್ಧ ಪತ್ರಿಕೆ’ ಯ ಸಂಪಾದಕನೆನ್ನಲಾದ ಸಂತೋಷ್ ಸುವರ್ಣ ಎಂಬುವವರು ಕುಂದಾಪುರದ ಪ್ರಥಮ ದರ್ಜೆ ವಿದ್ಯುತ್ ಗುತ್ತಿಗೆದಾರ ಗಣೇಶ್ ಪೂಜಾರಿ ಎಂಬುವವರಿಗೆ ಸೆ.೧ರಂದು ಕರೆಮಾಡಿ, ತಾವು ಒಂದು ಅನೈತಿಕ ಚಟುವಟಿಕೆಯಲ್ಲಿ ಭಾಗಿಯಾಗಿದ್ದು ಅದಕ್ಕೆ ಪೂರಕವಾಗಿ ಕಾಗದ ಪತ್ರಗಳು ಹಾಗೂ ಪೋನ್ ಕರೆಗಳು ನಮಗೆ ಬರುತ್ತಿದೆ. ಈ ಬಗ್ಗೆ ನಮ್ಮ ಪತ್ರಿಕೆಯಲ್ಲಿ ಬರೆಯುವುದಾಗಿ ಹೇಳಿಕೊಂಡಿದ್ದ. ಇದೆಲ್ಲ ಸುಳ್ಳೆಂದು ಹೇಳಿದರೂ ಮತ್ತೆ ಮತ್ತೆ ಕರೆಮಾಡಿ ಬೇರೆ ಕಾರಣ ರೂ. 30,000ದಿಂದ 1,20,000ದ ವರೆಗೆ ಹಣದ ಬೇಡಿಕೆ ಒಡ್ಡಿದ್ದಾರೆ ಎಂದು ಗಣೇಶ್ ಪೂಜಾರಿ ದೂರು ನೀಡಿದ್ದಾರೆ.
ಸಂತೋಷ್ ಸುವರ್ಣ ಕರೆ ಮಾಡಿದಾಗ ಓದುಗರ ಬಳಗ ವಿಠಲವಾಡಿ ಹಾಗೂ ಅಪರಿಚಿತ ಸಂಖ್ಯೆಯಿಂದ ದೂರವಾಣಿ ಕರೆಗಳು ಬರುತ್ತಿದ್ದು ನಿಮ್ಮ ಹಗರಣಗಳ ವರದಿಯನ್ನು ಪ್ರಕಟಿಸಲು ಒತ್ತಡ ಹೆಚ್ಚುತ್ತಿದೆ. ನೀವು ಹಣ ನೀಡದಿದ್ದರೇ ಪ್ರಕಟಿಸಲೇಬೇಕಾಗುತ್ತದೆ ಎಂದು ಸಂತೋಷ್ ಸುವರ್ಣ ಹೇಳಿದ ಬಗ್ಗೆ ಅವರು ಕಳುಹಿಸಿದ ಮೆಸೆಜ್, ಕರೆಯ ರೆಕಾರ್ಡ್ ಕಾಪಿಯನ್ನು ಗಣೇಶ್ ಪೂಜಾರಿ ಪೊಲೀಸರಿಗೆ ನೀಡಿದ್ದಾರೆ.
ಸಂಘದಿಂದ ಅಮಾನತುಗೊಳಿಸಲು ಆಗ್ರಹ
ಪತ್ರಿಕೆಯ ಹೆಸರು ಹೇಳಿಕೊಂಡು ಇಲ್ಲಸಲ್ಲದ ಆರೋಪಗಳನ್ನು ಮಾಡಿ ಬೆದರಿಕೆಯೊಡ್ಡಿ, ಹಣದ ಬೇಡಿಕೆಯನ್ನಿಟ್ಟ ಸಂತೋಷ್ ಸುವರ್ಣ ಜಿಲ್ಲಾ ಇಲ್ಲವೇ ರಾಜ್ಯದ ಪತ್ರಕರ್ತರ ಸಂಘದ ಸದಸ್ಯರಾಗಿದ್ದರೇ ಸಂಘದಿಂದ ವಜಾಗೊಳಿಸುವಂತೆ ಗಣೇಶ್ ಪೂಜಾರಿ ಆಗ್ರಹಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಕಮಲಾಕ್ಷ ಹಾಗೂ ರಮೇಶ್ ಕುಮಾರ್ ಹಾಜರಿದ್ದರು.















