ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ನಮ್ಮ ದೇಶಕ್ಕೆ ಅಹಿಂಸೆಯಿಂದ ಸ್ವಾತಂತ್ರ್ಯ ಬಂದಿಲ್ಲ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಲಕ್ಷಾಂತರ ಮಂದಿ ಹುತಾತ್ಮರಾಗಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ಮೇಲೆ ಅನೇಕರು ದಾಳಿ ಮಾಡಿದ್ದು, ಆಕ್ರಮಣ ಕೂಡ ನಡೆಯಿತು. ಸ್ವಾತಂತ್ರ್ಯದ ಬಳಿಕ ಅಧಿಕಾರದ ಲಾಲಸೆಯಿಂದ ದೇಶವನ್ನು ವಿಭಜಿಸಲಾಯಿತು. ದೇಶದ ವ್ಯವಸ್ಥೆಯನ್ನು ನಾಶ ಮಾಡುವ ಕೆಲಸ ನಡೆಯಿತು. ದೇಶದ ಭೂಭಾಗವನ್ನು ಕಳೆದುಕೊಂಡೆವು. ಇಂತಹ ಸಂಪಧ್ಭರಿತ ಭಾರತ ಏಕತೆ, ಅಖಂಡತೆಯನ್ನು ಪುನರ್ ಸ್ಥಾಪಿಸಿದಲು ಅಖಂಡ ಭಾರತ ಪರಿಕಲ್ಪನೆಯನ್ನು ಸಾಕಾರ ಮಾಡಲು ಭಾರತೀಯರು ಒಗ್ಗಟ್ಟಿನಿಂದ ಹೋರಾಟ ಮಾಡಬೇಕು ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮಾಜಿ ಧರ್ಮದರ್ಶಿ ನವೀನಚಂದ್ರ ಉಪ್ಪುಂದ ಹೇಳಿದರು.
ಗಂಗೊಳ್ಳಿ ಹಿಂದು ಜಾಗರಣ ವೇದಿಕೆ ಆಶ್ರಯದಲ್ಲಿ ಗಂಗೊಳ್ಳಿಯ ಶ್ರೀ ವೀರೇಶ ಮಾಂಗಲ್ಯ ಮಂದಿರದಲ್ಲಿ ಜರಗಿದ ಅಖಂಡ ಭಾರತ ಸಂಕಲ್ಪ ದಿನಾಚರಣೆ ಮತ್ತು ಭಾರತ್ ಮಾತಾ ಪೂಜನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮತಾಂತರ, ಲವ್ ಜಿಹಾದ್ ಮೊದಲಾದವುಗಳಿಂದ ಹಿಂದುಗಳು ಭಯದಲ್ಲಿ ಜೀವನ ನಡೆಸುವ ಸ್ಥಿತಿ ನಿರ್ಮಾಣವಾಗಿದೆ. ಐಸಿಸ್ ಹೆಸರಿನಲ್ಲಿ ಕರಾವಳಿಯಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಸುವ ಹುನ್ನಾರ ನಡೆಸಲಾಗುತ್ತಿದೆ. ಹೀಗಾಗಿ ಹಿಂದು ಸಮಾಜ ಜಾಗೃತವಾಗಬೇಕು. ಹಿಂದುಗಳು ಒಗ್ಗಟ್ಟು, ಐಕ್ಯತೆಯನ್ನು ಕಾಪಾಡಿಕೊಂಡು ಸಮಸ್ಯೆಗಳನ್ನು ದಿಟ್ಟವಾಗಿ ಎದುರಿಸಬೇಕು ಎಂದು ಅವರು ಹೇಳಿದರು.
ಗಂಗೊಳ್ಳಿ ಶ್ರೀ ವೀರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಜಿ.ರವೀಶ್ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿಂದು ಜಾಗರಣ ವೇದಿಕೆ ಬೈಂದೂರು ತಾಲೂಕು ಅಧ್ಯಕ್ಷ ರಾಜೇಶ ಆಚಾರ್ಯ ಉಪಸ್ಥಿತರಿದ್ದರು.
ಗಂಗೊಳ್ಳಿ ಹಿಂದು ಜಾಗರಣ ವೇದಿಕೆಯ ಯಶವಂತ ಗಂಗೊಳ್ಳಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.