ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಮೀನುಗಾರರ ರಕ್ಷಣೆಗಾಗಿ ನೀಡುವ ಅತ್ಯಾಧುನಿಕ ಜೀವ ರಕ್ಷಕ ಸಲಕರಣೆಗಳನ್ನು ನೀಡುವಂತೆ ಮತ್ತು ಮೀನುಗಾರರ ರಕ್ಷಣೆಗಾಗಿ ಗಂಗೊಳ್ಳಿಯ ಬಂದರು ಅಳಿವೆ ವ್ಯಾಪ್ತಿಯಲ್ಲಿ 24×7 ರಕ್ಷಣಾಪಡೆ ಕಾರ್ಯನಿವಹಿಸುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಆಗ್ರಹಿಸಿ ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರ ಸಂಘದ ವತಿಯಿಂದ ಕುಂದಾಪುರ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.
ಸಂಘದ ಅಧ್ಯಕ್ಷ ಯಶವಂತ ಖಾರ್ವಿ ನೇತೃತ್ವದಲ್ಲಿ ಕುಂದಾಪುರದಲ್ಲಿ ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕರನ್ನು ಭೇಟಿ ಮಾಡಿ ಮೀನುಗಾರರ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ ಮನವಿ ಸಲ್ಲಿಸಲಾಯಿತು.
ಮೀನುಗಾರರು ತಮ್ಮ ಹೊಟ್ಟೆಪಾಡಿಗಾಗಿ ಸಮುದ್ರಕ್ಕೆ ತೆರಳಿ ಮೀನುಗಾರಿಕೆ ಮಾಡುವುದು ಅನಿವಾರ್ಯವಾಗಿದೆ. ಈ ಸಂದರ್ಭದಲ್ಲಿ ಸಮುದ್ರದಲ್ಲಿ ಏಕಾಏಕಿ ಹವಾಮಾನ ವೈಪರಿತ್ಯವಾದರೆ ತನ್ನನ್ನು ತಾನು ರಕ್ಷಣೆ ಮಾಡಲು ಯಾವುದೇ ರೀತಿಯ ಜೀವ ರಕ್ಷಣಾ ಸಾಧನಗಳು ದೋಣಿಯಲ್ಲಿ ಇರದೇ ಇರುದರಿಂದ ಸರಕಾರ ಎಲ್ಲಾ ಮೀನುಗಾರರಿಗೆ ಉಚಿತವಾಗಿಜೀವ ರಕ್ಷಕ ಸಲಕರಣೆಗಳನ್ನು ಹಾಗೂ ವಿವಿಧ ಸೌಲಭ್ಯಗಳನ್ನು ನೀಡುವಂತೆ ಮತ್ತು ಸರಕಾರದ ಗಮನಕ್ಕೆ ಬರುವಂತೆ ಸರಕಾರಕ್ಕೆ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ಮೀನುಗಾರರ ಅಂಕಿಅಂಶದ ಸಮೇತ ಪ್ರಸ್ತಾವನೆಯನ್ನು ಸಲ್ಲಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಮೀನುಗಾರರು ಮೀನುಗಾರಿಕೆಯನ್ನು ಮುಗಿಸಿಕೊಂಡು ಅಳಿವೆ ಬಾಗಿಲಿನ ಸಮೀಪ ತಲುಪಿದಾಗ ಕೆಲವೊಮ್ಮೆ ಹವಾಮಾನದ ವೈಪರಿತ್ಯದಿಂದ ಹಾಗೂ ಅಳಿವೆ ಬಾಗಿಲಿನಲ್ಲಿ ಸರಿಯಾದ ವ್ಯವಸ್ಥೆ ಇಲ್ಲದಿರುದರಿಂದ ಮತ್ತು ಅಲೆಯ ಅಬ್ಬರ ಏರಿಳಿತವಾಗುವ ಕಾರಣದಿಂದ ಮೀನುಗಾರರು ತೊಂದರೆ ಅನುಭವಿಸುವಂತಾಗಿದೆ ಅಲ್ಲದೇ ಮೀನುಗಾರರ ಜೀವಕ್ಕೂ ಹಾನಿಯಾಗುವ ಸಂಭವವಿರುದರಿಂದ ಮೀನುಗಾರರು ಯಾವುದೇ ರೀತಿಯ ತೊಂದರೆಯನ್ನು ಅನುಭವಿಸದೆ ನಿರ್ಭಯತೆಯಿಂದ ಮೀನುಗಾರಿಕೆ ನಡೆಸುವಂತಾಗಲು ಗಂಗೊಳ್ಳಿಯ ಅಳಿವೆ ಬಾಗಿಲಿನಲ್ಲಿ ಜೀವ ರಕ್ಷಣಾಪಡೆ ಕಾರ್ಯನಿರ್ವಹಿಸುವ ಸಂಬಂಧ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಬೇಕೆಂದು ಒತ್ತಾಯಿಸಲಾಗಿದೆ.
ಮನವಿ ಸ್ವೀಕರಿಸಿದ ಸಹಾಯಕ ನಿರ್ದೇಶಕಿ ಸುಮಲತಾ, ನಾಡದೋಣಿ ಮೀನುಗಾರರ ಬೇಡಿಕೆಗಳ ಬಗ್ಗೆ ಸರಕಾರಕ್ಕೆ ವಿಸ್ತ್ರೃತ ವರದಿ ಸಲ್ಲಿಸುವುದಾಗಿ ಭರವಸೆ ನೀಡಿದರು.
ಸಂಘದ ಗೌರವಾಧ್ಯಕ್ಷ ಗಣಪತಿ ಖಾರ್ವಿ, ಜತೆ ಕಾರ್ಯದರ್ಶಿ ಶಿವರಾಜ್ ಖಾರ್ವಿ ಹಾಗೂ ನಿರ್ದೇಶಕ ರಾಜೇಶ ಖಾರ್ವಿ ಉಪಸ್ಥಿತರಿದ್ದರು.