ಚಾರ್ಲಿ ಚಾಪ್ಲಿನ್ ಲೀಫ್ ಆರ್ಟ್ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ಗೆ ಸೇರ್ಪಡೆ

Click Here

Call us

Call us

Call us

ಶ್ರೀಗೌರಿ ಎಸ್. ಜೋಶಿ
ಮೂಡುಬಿದಿರೆ:
ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅತ್ಯಂತ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸಮಾಜಕ್ಕೆ ಕೊಡುಗೆಯಾಗಿಸುತ್ತಿರುವುದು ಗೊತ್ತಿರುವ ವಿಷಯವೇ. ಸಂಸ್ಥೆಯ ಹಲವಾರು ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನಾರ್ಹ ಸಾಧನೆಗಳನ್ನು ಮಾಡುತ್ತಿದ್ದು ಕರ್ನಾಟಕದ ಕೀರ್ತಿಪತಾಕೆಯನ್ನು ಎತ್ತಿ ಹಿಡಿದಿದ್ದಾರೆ. ಇದೀಗ ಈ ಗರಿಮೆಗಳ ಸಾಲಿಗೆ ಮತ್ತೊಬ್ಬ ವಿದ್ಯಾರ್ಥಿ ಸಾಧಕನ ಸಾಧನೆ ಸೇರುತ್ತಿದೆ. ಅವರೇ ಲೀಫ್ ಆರ್ಟಿಸ್ಟ್ ಅಕ್ಷಯ್ ಕೋಟ್ಯಾನ್. 1×1.7ಸೆಂ.ಮೀ. ಅಳತೆಯ ಫಿಗ್ ಎಲೆಯಲ್ಲಿ ಅವರು ರಚಿಸಿದ ಹಾಸ್ಯ ಜಗತ್ತಿನ ದಿಗ್ಗಜ ಚಾರ್ಲಿ ಚಾಪ್ಲಿನ್‌ರ ವಿಶೇಷ ಲೀಫ್ ಆರ್ಟ್ ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ಗೆ ಸೇರ್ಪಡೆಗೊಂಡಿದೆ. ಈ ಮೂಲಕ ಅಕ್ಷಯ್ ಕೋಟ್ಯಾನ್‌ರ ಲೀಫ್ ಆರ್ಟ್ ಪ್ರತಿಭೆಗೆ ಬಂಗಾರದ ಮೆರುಗು ಮೂಡಿದೆ.

Call us

Click Here

ಅಕ್ಷಯ್ ಕೋಟ್ಯಾನ್ ಆಳ್ವಾಸ್ ಪದವಿ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ವಿಷುವಲ್ ಆರ್ಟ್ಸ್‌ನ ಮೂರನೇ ವರ್ಷದಲ್ಲಿ ಓದುತ್ತಿದ್ದಾರೆ. ಸದಾ ಏನನ್ನಾದರೂ ಹೊಸದನ್ನು ಮಾಡಬೇಕೆಂದು ತುಡಿಯುವ ಅಕ್ಷಯ್‌ರ ಮನಸ್ಸಿಗೆ ಹೊಳೆದಿದ್ದು ಲೀಫ್ ಆರ್ಟ್. ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಹೇಗಾದರೂ ಸಮಯದ ಸದುಪಯೋಗ ಮಾಡಬೇಕೆಂದುಕೊಂಡ ಅಕ್ಷಯ್ ಶುರು ಮಾಡಿದ್ದು ಲೀಫ್ ಆರ್ಟ್‌ನ್ನು. ಅತ್ಯಂತ ಸೂಕ್ಷ್ಮವಾದ ಕಲಾಕೃತಿಗಳ ಮೇಲೆ ಅಷ್ಟೇ ಸೃಜನಶೀಲತೆಯಿಂದ ವಿವಿಧ ಕಲಾಕೃತಿಗಳ ಕೆತ್ತನೆ ಮಾಡುವುದನ್ನು ಅವರು ರೂಢಿಸಿಕೊಂಡರು. ಈ ಬಗೆಯ ಕಲಾಕೃತಿಗಳನ್ನು ಚೀನಾದಲ್ಲಿ ಮಾಡಲಾಗುತ್ತದೆ. ಪ್ರಕೃತಿ ಸಂಬಂಧೀ ವಿಷಯಗಳನ್ನು ಎಲೆಗಳಲ್ಲಿ ಕಾರ್ವಿಂಗ್ ಮಾಡಿ ಲೀಫ್ ಆರ್ಟ್‌ನ್ನು ರಚಿಸಲಾಗುತ್ತದೆ. ಆದರೆ ಭಾರತದಲ್ಲಿ ಇದೇ ಮೊದಲ ಬಾರಿಗೆ ಪೋರ್ಟ್ರೇಟ್ (ಭಾವಚಿತ್ರ ಮಾದರಿ)ಗಳನ್ನು ಎಲೆಗಳಲ್ಲಿ ಕಾರ್ವ್ ಮಾಡುವ ಅಪರೂಪದ ಕಲಾ ಮಾದರಿಯನ್ನು ಅಕ್ಷಯ್ ಪ್ರಯತ್ನಿಸಿದ್ದಾರೆ, ಅದರಲ್ಲಿ ಯಶಸ್ವಿಯೂ ಆಗಿದ್ದಾರೆ.

ಮೊದಲು ಬಿಳಿ ಮತ್ತು ಕಪ್ಪು ಹಾಳೆಗಳನ್ನು ಬಳಸಿ ಆರ್ಟ್ ಮಾಡುತ್ತಿದ್ದ ಅಕ್ಷಯ್ ಬಳಿಕ ಅದನ್ನು ಪ್ರಕೃತಿ ದತ್ತವಾಗಿ ಸಿಗುವ ಎಲೆಗಳಲ್ಲಿ ಮೂಡಿಸುವ ಪ್ರಯತ್ನ ಮಾಡಿದರು. ಹಲಸಿನ ಎಲೆಯಲ್ಲಿ ನಟಿ ರಶ್ಮಿಕಾ ಮಂದಣ್ಣರ ಕೆತ್ತನೆ ಮಾಡಲು ಯತ್ನಿಸಿದ್ದರು. ಆದರೆ ಮೊದಲ ಪ್ರಯತ್ನ ಅಷ್ಟು ಖುಷಿ ಕೊಟ್ಟಿರಲಿಲ್ಲ. ಬಳಿಕ ಛಲ ಬಿಡದೇ ಅದೇ ಹಲಸಿನ ಎಲೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಕೆತ್ತನೆ ಮಾಡಿದ್ದರು. ಮೋದಿಯವರ ಆರ್ಟ್ ಬಂದದ್ದೇ ಬಂದದ್ದು ಅವರ ಲೀಫ್ ಆರ್ಟ್ ಹೆಚ್ಚು ಪ್ರಸಿದ್ಧಿಗೆ ಬಂದಿತ್ತು. ಎಲೆಗಳ ಕೆತ್ತನೆಯಲ್ಲಿ ಅಕ್ಷಯ್ ಹೊಸ ಹೊಸ ವಿಷಯಗಳನ್ನು ಪ್ರಯತ್ನಿಸುತ್ತ ಸಾಗಿದರು. ಹಲಸಿನ ಎಲೆಗಳಿಗಿಂತಲೂ ಅಶ್ವತ್ಥ ಎಲೆಗಳು ಹೆಚ್ಚು ಕಾಲ ಬರುತ್ತವೆ ಎಂಬುದನ್ನು ಮನಗಂಡ ಅವರು ಬಳಿಕ ಹೆಚ್ಚಿನ ಕಲಾಕೃತಿಗಳನ್ನು ಅಶ್ವತ್ಥ ಎಲೆಗಳಲ್ಲಿ ಮಾಡಿದರು. ಕೇವಲ ಎರಡೂವರೆ ಗಂಟೆಗಳ ಅವಧಿಯಲ್ಲಿ ಯಾವುದೇ ಪೋಟ್ರೇಟ್ ಮಾಡಬಲ್ಲ ಚಾಕಚಕ್ಯತೆಯನ್ನು ಅಕ್ಷಯ್ ಮೈಗೂಡಿಸಿಕೊಂಡಿದ್ದಾರೆ.

ಅಕ್ಷಯ್‌ರ ಕಲಾತ್ಮಕ ಎಲೆಗಳಲ್ಲಿ ಸೃಜನಶೀಲವಾಗಿ ಅರಳಿದ ಸಾಧಕರ ಪಟ್ಟಿ ದೊಡ್ಡದಿದೆ. ಕೇರಳದ ಬ್ರಹ್ಮಶ್ರೀ ನಾರಾಯಣ ಗುರು, ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ. ಡಿ.ವೀರೇಂದ್ರ ಹೆಗ್ಗಡೆ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉದ್ಯಮಿ ವಿಜಯ್ ಸಂಕೇಶ್ವರ, ನಟರಾದ ದರ್ಶನ್, ಯಶ್, ಗೋಲ್ಡನ್ ಸ್ಟಾರ್ ಗಣೇಶ್, ರಕ್ಷಿತ್ ಶೆಟ್ಟಿ, ಅರವಿಂದ ಬೋಳಾರ್, ಅನಿರುದ್ಧ್, ಜಗ್ಗೇಶ್, ಶಾಸಕರಾದ ಹರೀಶ್ ಪೂಂಜ, ವೇದವ್ಯಾಸ ಕಾಮತ್, ಉಮಾನಾಥ್ ಕೋಟ್ಯಾನ್ ಸೇರಿದಂತೆ 200ಕ್ಕೂ ಅಧಿಕ ಸಾಧಕರ ಪೋಟ್ರೇಟ್‌ಗಳಿಗೆ ಅಕ್ಷಯ್ ತಮ್ಮ ಲೀಫ್ ಆರ್ಟ್ ಮೂಲಕ ಜೀವ ನೀಡಿದ್ದಾರೆ. ಅವರ ಪ್ರತಿಭೆಯನ್ನು ಗುರುತಿಸಿದ್ದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ವಿದ್ಯಾಭ್ಯಾಸ ಪ್ರೋತ್ಸಾಹ ಧನವೆಂದು 1 ಲಕ್ಷ ರೂಪಾಯಿಯನ್ನೂ ನೀಡಿದ್ದಾರೆ.

ತಾಳ್ಮೆ, ಕ್ರಿಯಾಶೀಲತೆ, ಸೃಜನತೆ, ಹೊಸತನವನ್ನು ಬಯಸುವ ಕ್ಷೇತ್ರ ಲೀಫ್ ಆರ್ಟ್. ಎಲೆಗಳಲ್ಲಿ ಕಲಾಕೃತಿಗಳನ್ನು ಕಾರ್ವ್ ಮಾಡಬಲ್ಲ ತಾದಾತ್ಮ್ಯತೆ, ಸೂಕ್ಷ್ಮತೆಯನ್ನು ಅಕ್ಷಯ್ ಬೆಳೆಸಿಕೊಂಡಿದ್ದಾರೆ. ಅದಕ್ಕೆ ಸಾಕ್ಷಿ ಅವರ ಬತ್ತಳಿಕೆಯಲ್ಲಿ ಅರಳಿ ನಿಂತಿರುವ ನೂರಾರು ಕಲಾಕೃತಿಗಳು. ಅವರ ಪ್ರತಿಭೆಯನ್ನು ಪ್ರೋತ್ಸಾಹಿಸಿದ ಮಿತ್ರವರ್ಗ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ಗೆ ಅರ್ಜಿ ಸಲ್ಲಿಸುವಂತೆ ಬೆನ್ನು ತಟ್ಟಿ ಪ್ರೋತ್ಸಾಹಿಸಿತು. ಈ ನಿಟ್ಟಿನಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಅನೀಶ್, ‘ಕನಸು ಮಾರಾಟಕ್ಕಿದೆ’ ಖ್ಯಾತಿಯ ಸ್ಮಿತೇಶ್, ಖ್ಯಾತ ದೈವಪಾತ್ರಿ ಹಾಗೂ ಮಾಡೆಲ್ ಸನ್ನಿಧ್ ಪೂಜಾರಿಯವರ ಸಹಾಯ ತುಂಬಾ ದೊಡ್ಡದು ಎಂದು ಅಕ್ಷಯ್ ಸ್ಮರಿಸುತ್ತಾರೆ. ಈ ಬಾರಿ ಅವರು ಚಾರ್ಲಿ ಚಾಪ್ಲಿನ್‌ರ ಪೋರ್ಟ್ರೇಟ್‌ನ್ನು ಫಿಗ್ ಎಲೆಯಲ್ಲಿ ರಚಿಸಿದ್ದು, ಈ ಕೆತ್ತನೆಗೆ ಈಗ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಗರಿ ಮುಡಿಗೇರಿದೆ.

Click here

Click here

Click here

Click Here

Call us

Call us

ಅಕ್ಷಯ್ ಲೀಫ್ ಆರ್ಟ್‌ಗೆ ಮಾತ್ರ ಸೀಮಿತರಾದರೆಂದುಕೊಂಡರೆ ಅದು ಖಂಡಿತ ತಪ್ಪು. ಅತಿ ಸೂಕ್ಷ್ಮವಾದ ಪೆನ್ಸಿಲ್ ಥ್ರೆಡ್, ಚಾಕ್‌ಪೀಸ್‌ಗಳಲ್ಲಿ ಕೂಡ ಅವರು ವಿಶಿಷ್ಟ ಕೆತ್ತನೆಗಳನ್ನು ಮಾಡಬಲ್ಲರು. ಜೊತೆಗೆ ಸ್ಯಾಂಡ್ ಆರ್ಟ್‌ನಲ್ಲಿಯೂ ಪರಿಣತಿ ಸಾಧಿಸಿದ್ದಾರೆ. ಮಲ್ಪೆಯಲ್ಲಿ ಅವರು ತಮ್ಮ ಸ್ನೇಹಿತರ ತಂಡದೊಂದಿಗೆ ರಚಿಸಿದ ತುಳುನಾಡ ಸಂಸ್ಕೃತಿಯ ಮರಳು ಕಲಾಕೃತಿಗೆ ವಿಶೇಷ ಮನ್ನಣೆಯೂ ಸಿಕ್ಕಿದೆ. ಇಂತಹ ಪ್ರತಿಭಾನ್ವಿತರಾಗಿರುವ ಅಕ್ಷಯ್ ಸರಕಾರಿ ಶಾಲಾ ಮಕ್ಕಳಿಗೆ ಈ ಬಗೆಯ ಕಲಾ ಪಾಠ ಮಾಡುವ ವಿಶಿಷ್ಟ ಗುರಿಯನ್ನು ಹೊಂದಿದ್ದಾರೆ. ಅಲ್ಲದೇ ತಮ್ಮ ಕಲೆಯ ಮೂಲಕ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗುವ ದೊಡ್ಡ ಕನಸನ್ನು ಹೊಂದಿದ್ದಾರೆ. ಅಕ್ಷಯ್‌ರ ಎಲ್ಲ ಕನಸುಗಳೂ ನನಸಾಗಲಿ ಎಂಬುದು ನಮ್ಮ ಹಾರೈಕೆ.

ಲೀಫ್ ಆರ್ಟ್ ಮಾಡಿಸಲು ಬಯಸುವವರು ಹಾಗೂ ಅಕ್ಷಯ್‌ರನ್ನು ಅಭಿನಂದಿಸಲು ಬಯಸುವವರು ಮೊ. 9964787609ಗೆ ಸಂಪರ್ಕಿಸಬಹುದು.

Leave a Reply