ಗ್ರಾಮ ಪಂಚಾಯತ್‌ನ ಅನುದಾನ ಬಳಕೆ ನಿರ್ಬಂಧ ಸಡಿಲಿಸಲು ನಾಗೇಶ್ ಅಳ್ವೆಗದ್ದೆ ಆಗ್ರಹ

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಗ್ರಾಮ ಪಂಚಾಯಿತಿಗಳಿಗೆ ಕೇಂದ್ರದ 15ನೇ ಹಣಕಾಸು ಆಯೋಗ ನಿಗದಿಗೊಳಿಸಿದ ಅನುದಾನ ವೆಚ್ಚಕ್ಕೆ ವಿಧಿಸಿದ ನಿರ್ಬಂಧಗಳು ಗ್ರಾಮದ ಅಗತ್ಯಗಳಿಗೆ ವೆಚ್ಚ ಮಾಡಲು ತಡೆಯಾಗುವುದರಿಂದ ಅವುಗಳನ್ನು ಸಡಿಲಿಸಬೇಕು ಎಂದು ಶಿರೂರು ಗ್ರಾಮ ಪಂಚಾಯಿತಿ ಸದಸ್ಯ ನಾಗೇಶ್ ಅಳ್ವೆಗದ್ದೆ ಆಗ್ರಹಿಸಿದ್ದಾರೆ.

Call us

Click Here

ಇದು ಗ್ರಾಮ ಪಂಚಾಯಿತಿಗಳ ಜನಸಂಖ್ಯೆ ಆಧರಿಸಿ ನಿಗದಿಯಾಗುವ ದೊಡ್ಡ ಮೊತ್ತದ ಅನುದಾನ. ಈ ಬಾರಿಯ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಇದರ ಶೇ40 ಅನಿರ್ಬಂಧಿತ ಮತ್ತು ಶೇ 60 ನಿರ್ಬಂಧಿತ ಅನುದಾನ. ನಿರ್ಬಂಧಿತ ಅನುದಾನದ ಶೇ30 ಕುಡಿಯುವ ನೀರು, ಶೇ 30 ನೈರ್ಮಲ್ಯ ಹಾಗೂ ತ್ಯಾಜ್ಯ ನಿರ್ವಹಣೆ ಹೊರತಾಗಿ ಅನ್ಯ ಉದ್ದೇಶಗಳಿಗೆ ವೆಚ್ಚ ಮಾಡುವಂತಿಲ್ಲ. ಶೇ 40ರ ಅನಿರ್ಬಂಧಿತ ಭಾಗವನ್ನು ಅಗತ್ಯ ಅಭಿವೃದ್ಧಿ ಕಾರ್ಯಗಳಿಗೆ ಬಳಸಬಹುದಾದರೂ ಅದರಲ್ಲಿ ಶೇ 25 ಪರಿಶಿಷ್ಟ ಜಾತಿ, ಪಂಗಡದ ಮೂಲ ಸೌಕರ್ಯ ಅಭಿವೃದ್ಧಿಗೆ ಮೀಸಲಿಡಬೇಕು. ರೂ 50 ಲಕ್ಷ ಅನುದಾನ ಪಡೆಯುವ ಗ್ರಾಮ ಪಂಚಾಯಿತಿ ರೂ 15ಲಕ್ಷವನ್ನು ಮಾತ್ರ ಗ್ರಾಮದ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ನಿರ್ವಹಣೆಗೆ ಬಳಸಬಹುದು. ಇದು ಯಾತಕ್ಕೂ ಸಾಲುವುದಿಲ್ಲ ಎಂದು ಅವರು ಒತ್ತಾಯಿಸಿದ್ದಾರೆ.

ಇನ್ನು ಶೇ 60 ದೊಡ್ಡ ಮೊತ್ತ ಆಗುವುದರಿಂದ ಅದನ್ನು ಕೇವಲ ನೀರು, ನೈರ್ಮಲ್ಯಕ್ಕಷ್ಟೆ ವೆಚ್ಚಮಾಡಲು ಸಾಧ್ಯವಿಲ್ಲ. ಕರಾವಳಿ ಜಿಲ್ಲೆಗಳ ಹಲವು ಪಂಚಾಯಿತಿಗಳು ಈಗಾಗಲೇ ಘನದ್ರವ ತ್ಯಾಜ್ಯ ನಿರ್ವಹಣಾ ಘಟಕಗಳನ್ನು ಸ್ಥಾಪಿಸಿಕೊಂಡು ಅವುಗಳದೇ ಆದಾಯದಲ್ಲಿ ನಿರ್ವಹಿಸುತ್ತಿವೆ. ಕುಡಿಯುವ ನೀರಿಗೆ ಜಲಜೀವನ ಮಿಶನ್ ಮತ್ತು ವಾರಾಹಿ ಮೂಲದ ಯೋಜನೆ ಅನುಷ್ಠಾನವಾಗುತ್ತಿದೆ. ಈ ನಿರ್ಬಂಧದ ಪರಿಣಾಮವಾಗಿ ಅಂತಹ ಪಂಚಾಯಿತಿಗಳಲ್ಲಿ ಅನುದಾನ ಬಳಕೆಯಾಗದೆ ಹಿಂತಿರುಗಿಸಬೇಕಾದ ಅನಿವಾರ್ಯತೆ ಎದುರಾಗಲಿದೆ ಎಂದು ಅವರು ಅತಂಕಿತರಾಗಿದ್ದಾರೆ. ಹಾಗಾಗಿ ಬಳಕೆಯ ಮಾರ್ಗದರ್ಶಿ ಸೂತ್ರಗಳನ್ನು ಬದಲಿಸಿ ಬಂದ ಹಣವನ್ನು ಗ್ರಾಮದ ಅಭಿವೃದ್ಧಿಗೆ ಪೂರಕವಾಗುವಂತೆ ಬಳಸಲು ಅವಕಾಶ ಕಲ್ಪಿಸಬೇಕು. ಹಿಂದೆ ಹೀಗೆ ಬದಲಿಸಿದ ನಿದರ್ಶನಗಳಿವೆ. ಈ ನಿಟ್ಟಿನಲ್ಲಿ ಜಿಲ್ಲೆಯ ಸಚಿವರು, ಸಂಸದರು, ಶಾಸಕರು, ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಒಕ್ಕೂಟ ಗಂಭೀರ ಚಿಂತನೆ ನಡೆಸಿ ಬದಲಾವಣೆ ಆಗುವಂತೆ ನೋಡಿಕೊಳ್ಳಬೇಕು ಎಂದು ವಿನಂತಿಸಿದ್ದಾರೆ.

ಇದರ ಬಗ್ಗೆ ಪ್ರತಿಕ್ರಿಯೆ ನೀಡಿದ ತಾಲ್ಲೂಕು ಪಂಚಾಯತ್ ರಾಜ್ ಒಕ್ಕೂಟದ ಅಧ್ಯಕ್ಷ ಕೆ. ಉದಯಕುಮಾರ ಶೆಟ್ಟಿ, ಅನುದಾನ ಬಳಕೆಯ ಸೂತ್ರಗಳು ಪ್ರಾದೇಶಿಕ ಅಗತ್ಯಗಳಿಗೆ ಅನುಗುಣವಾಗಿ ಬದಲಾಗಬೇಕು. ಈ ನಿಟ್ಟಿನಲ್ಲಿ ಒಕ್ಕೂಟ ಪ್ರಯತ್ನಿಸಲಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *

19 + fifteen =