ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕೋವಿಡ್ ನಂತರದಲ್ಲಿ ಶೈಕ್ಷಣಿಕ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿದೆ. ಆನ್ಲೈನ್ ಶಿಕ್ಷಣ ಈಗ ಅನಿವಾರ್ಯವಾಗಿದ್ದು ಅದಕ್ಕೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವ ಜವಾಬ್ದಾರಿ ನಮ್ಮೆಲ್ಲರದ್ದೂ ಆಗಿದೆ. ಸರಕಾರಿ ಶಾಲೆಗಳಲ್ಲಿಯೂ ಗುಣಮಟ್ಟದ ಶಿಕ್ಷಣದ ದೊರೆಯುವಂತೆ ಮಾಡುವುದು ಸರಕಾರದ ಗುರಿಯಾಗಿದೆ ಎಂದು ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಹೇಳಿದರು.
ಅವರು ಶುಕ್ರವಾರ ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಕಾಗ್ನಿಜೆಂಟ್ ಕಂಪೆನಿ ಹೆಲ್ಫ್ ಟು ಎಜುಕೇಟ್ ಯೋಜನೆಯಡಿ ಬೈಂದೂರು ರೋಟರಿ ಸಂಸ್ಥೆಯ ಮೂಲಕ ಕೊಡಮಾಡಿದ ರೂ. 10 ಲಕ್ಷ ಮೌಲ್ಯದ 30 ಕಂಪ್ಯೂಟರ್ ಸಿಸ್ಟಮ್ ಹಸ್ತಾಂತರಿಸಿ ಮಾತನಾಡಿದರು.
ರೋಟರಿ ಕ್ಲಬ್ ಸಮಾಜ ಕಟ್ಟುವ ಕಾರ್ಯ ಮಾಡುತ್ತಿದೆ. ಬೈಂದೂರು ಸರಕಾರಿ ಕಾಲೇಜಿಗೆ ಕಾಗ್ನಿಜೆಂಟ್ ಸಂಸ್ಥೆಯ ಸಿಎಸ್ಆರ್ ಮೂಲಕ ನೀಡುವ ಕಾರ್ಯ ಮಾಡಿದೆ. ರೋಟರಿ ಸಂಸ್ಥೆಯ ಮೂಲಕ ಇನ್ನಷ್ಟು ಉತ್ತಮ ಕಾರ್ಯಗಳಾಗಲಿ ಎಂದರು.
ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಡಾ. ರಘು ನಾಯ್ಕ್ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಈ ಸಂದರ್ಭ ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಪ್ರವೀಣ ಶೆಟ್ಟಿ, ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ರೋಟರಿ ಝೋನಲ್ ಟ್ರೈನರ್ ಸೋಮನಾಥನ್ ಆರ್., ರೋಟರಿ ಝೋನಲ್ ಲೆಫ್ಟಿನೆಂಟ್ ಐ. ನಾರಾಯಣ, ರೋಟರಿ ಬೈಂದೂರು ನಿಟಕಪೂರ್ವ ಕಾರ್ಯದರ್ಶಿ ಎಂ. ಗೋವಿಂದ ಮೊದಲಾದವರು ಉಪಸ್ಥಿತರಿದ್ದರು.
ಕಾಲೇಜಿನ ಐಟಿ ಕೋ-ಆರ್ಡಿನೇಟರ್ ಡಾ. ಶಿವಕುಮಾರ್ ಸ್ವಾಗತಿಸಿದರು. ರೋಟರಿ ಬೈಂದೂರು ಕಾರ್ಯದರ್ಶಿ ವೈ. ಮಂಗೇಶ್ ಶ್ಯಾನುಭೋಗ್ ವಂದಿಸಿದರು. ರೋಟರಿ ಸದಸ್ಯ ಸುಬ್ರಹ್ಮಣ್ಯ ಉಪ್ಪುಂದ ಕಾರ್ಯಕ್ರಮ ನಿರೂಪಿಸಿದರು.