ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಹಿಂದುಳಿದಿರುವ ಬೈಂದೂರು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ವಿವಿಧ ಯೋಜನೆಗಳಿಗಾಗಿ ದಾಖಲೆ ಮೊತ್ತದ ಅನುದಾನ ಬಿಡುಗಡೆಯಾಗುತ್ತಿದೆ. ಆದರೆ ಇಲಾಖೆಗಳ ಅಧಿಕಾರಿಗಳ ಕೆಲಸದ ವೇಗ ನಿರೀಕ್ಷಿತ ಮಟ್ಟದಲ್ಲಿ ಇರದ ಕಾರಣ ಅನುಷ್ಠಾನ ಕುಂಠಿತವಾಗುತ್ತಿದೆ ಎಂದು ಸಂಸದ ಬಿ. ವೈ. ರಾಘವೇಂದ್ರ ಹೇಳಿದರು.
ಇಲ್ಲಿ ಬುಧವಾರ ಅವರು ಅಧಿಕಾರಿಗಳ ಸಭೆಯಲ್ಲಿ ಇಲಾಖೆಗಳ ಪ್ರಗತಿ ಪರಿಶೀಲನೆ ವೇಳೆ ಮಾತನಾಡಿದರು. ಕೆಲವು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಚುರುಕು ಮುಟ್ಟಿಸಿದರು.
ಮುಂದುವರಿದು ಮಾತನಾಡಿ ಜವುಳಿ ಪಾರ್ಕ್, ಪೀಠೋಪಕರಣ ತಯಾರಿ ಸಂಕೀರ್ಣ, ಕ್ರೀಡಾ ಸಂಕೀರ್ಣ, ನ್ಯಾಯಾಲಯ, ಕ್ರೀಡಾಂಗಣ, ವಸತಿ ಶಾಲೆಗಳೀಗೆ ಜಮೀಣು ಗುರುತಿಸಬೇಕು. ಮೂಕಾಂಬಿಕಾ ವನ್ಯಪ್ರಾಣಿ ಸಂರಕ್ಷಣಾ ತಾಣ, ಮರಿನಾ, ಬೀಚ್‌ವಾಕ್, ಉದ್ಯಾನ, ವಿಶ್ರಾಂತಿ ತಾಣ ನಿರ್ಮಾಣ ಯೋಜನೆಗಳು ಬರಲಿದ್ದು, ಅವುಗಳ ಅನುಷ್ಠಾನಕ್ಕೆ ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳಬೇಕು. ವೈದ್ಯಕೀಯ ಕಾಲೇಜಿಗೆ ಹಣ ಹೂಡಲು ಒಬ್ಬರು ಮುಂದಾಗಿದ್ದು, ಅದಕ್ಕೂ ಸ್ಥಳ ಮೀಸಲಿಡಲು ಕ್ರಮ ತೆಗೆದುಕೊಳ್ಳಬೇಕು. ಯಾವುದೇ ಯೋಜನೆ ಅಗತ್ಯ ಎನಿಸಿದರೆ, ಹಣ ಮಂಜೂರು ಮಾಡಲಾಗುವುದು ಎಂದರು.
ಕಂದಾಯ ಇಲಾಖೆಯಲ್ಲಿ 94-ಸಿ ಜಮೀನು ಮಂಜೂರಾತಿ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಡೀಮ್ಡ್ ಫಾರೆಸ್ಟ್ ಆಗಿರುವ ಜಮೀನು ಮಂಜೂರಾತಿ ಸಾಧ್ಯವಿಲ್ಲ. ಹಕ್ಕು ದಾಖಲೆ ಬದಲಾವಣೆಯ ಪ್ರಕರಣಗಳು ಸರ್ವೆಯರ್ ಹುದ್ದೆ ಕೊರೆತೆಯಿಂದ ತಡವಾಗುತ್ತಿವೆ. ಪಟ್ಟಣ ಪಂಚಾಯಿತಿ ವಾರ್ಡ್ ನಿಗದಿ ಪ್ರಸ್ತಾವನೆ ಜಿಲ್ಲಾಧಿಕಾರಿಗೆ ಕಳುಹಿಸಲಾಗಿದೆ. ನ್ಯಾಯಾಲಯ, ಆಸ್ಪತ್ರೆ, ಪಾಲಿಟೆಕ್ನಿಕ್, ಜಾನುವಾರು ಆಸ್ಪತ್ರೆಗಳಗೆ ಜಮೀನು ಕಾದಿರಿಸುವ ಪ್ರಕ್ರಿಯೆ ವಿವಿಧ ಹಂತಗಳಲ್ಲಿವೆ. ಕೊಡೇರಿ ಬಂದರಿನ ಏಳಂ ಪ್ರಾಂಗಣ ಕೆಲಸ ನಡೆಯುತ್ತಿದೆ. ರಸ್ತೆಗಳಿಗೆ ಮಂಜೂರಾಗಿರುವ ಅನುದಾನ ಬಳಕೆಗೆ ಅಂದಾಜು ಪಟ್ಟಿ ತಯಾರಿಸಲಾಗುತ್ತಿದೆ. ಮರವಂತೆ ಬಂದರು ಎರಡನೆ ಹಂತದ ಕಾಮಗಾರಿ ಟೆಂಡರ್ ಆಗಿದೆ ಎಂದು ಕುಂದಾಪುರ ಉಪ ವಿಭಾಗಾಧಿಕಾರಿ ರಾಜು ಕೆ. ಹೇಳಿದರು.
ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಮಾತನಾಡಿ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸಬೇಕು. ೯೪-ಸಿ ಇಲ್ಲಿನ ದೊಡ್ಡ ಸಮಸ್ಯೆ. ಅದನ್ನು ಆದ್ಯತೆಯ ಮೇಲೆ ಪರಿಹರಿಸಬೇಕು ಎಂದರು.
ಗದಗಕ್ಕೆ ಹೋಗುವ ಮಾರ್ಗದಲ್ಲಿ ಸಭೆಗೆ ಅನಿರೀಕ್ಷಿತವಾಗಿ ಆಗಮಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕಂದಾಯ ಇಲಾಖೆ ಪ್ರಗತಿ ಏನೂ ಸಾಲದು ಎಂದರು. ಅದಕ್ಕೆ ದನಿಗೂಡಿಸಿದ ರಾಘವೇಂದ್ರ ಕಂದಾಯ ಇಲಾಖೆಯಲ್ಲಿ ಹಣ ನೀಡದೆ ಕೆಲಸ ಆಗುವುದಿಲ್ಲ. ಅಧಿಕಾರಿಗಳು ಈ ಪ್ರವೃತ್ತಿಯಿಂದ ಹೊರಬರಬೇಕು ಎಂದರು. ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್ ಕಾಂತರಾಜ್ ಕ್ಷೇತ್ರದ ಹಲವು ರಸ್ತೆಗಳ ಅಂದಾಜು ಪಟ್ಟಿ ಸಿದ್ಧವಾಗಿದೆ. ಕೆಲವದರ ಕಾಮಗಾರಿ ಆರಂಭವಾಗಿದೆ, ಸೌಡ ಸೇತುವೆ ಕಾಮಗಾರಿ ಶೀಘ್ರ ಆರಂಭವಾಗಲಿದೆ ಎಂದರು.
ತಹಶೀಲ್ದಾರ್ ಶೋಭಾಲಕ್ಷ್ಮೀ ಸ್ವಾಗತಿಸಿದರು. ಕುಂದಾಪುರ ಉಪ ವಿಭಾಗಾಧಿಕಾರಿ ರಾಜು ಕೆ, ಕುಂದಾಪುರ ತಹಶೀಲ್ದಾರ್ ಕಿರಣ್ ಗೌರಯ್ಯ, ಮೀನುಗಾರಿಕಾ ಇಲಾಖೆಯ ಎಂಜಿನಿಯರ್ ಗಣೇಶ್, ರಾಜ್ಯ ಯೋಜನಾ ಸಮಿತಿ ಸದಸ್ಯೆ ಪ್ರಿಯದರ್ಶಿನಿ, ಬಿಜೆಪಿ ವಲಯಾಧ್ಯಕ್ಷ ದೀಪಕ್‌ಕುಮಾರ ಶೆಟ್ಟಿ ಇದ್ದರು.