ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರದ ವತಿಯಿಂದ ಭಾನುವಾರ ನಾವುಂದದ ಸ್ಕಂದ ಸಭಾಭವನದಲ್ಲಿ ಬೈಂದೂರು ವಲಯ ಶಿಕ್ಷಕರ ದಿನಾಚರಣೆಯ ನಡೆಯಿತು.
ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿ ಬೋಧನಾ ಕೌಶಲ, ಅನುಕರಣೀಯ ವ್ಯಕ್ತಿತ್ವ, ಮಾನವೀಯ ಅನುಕಂಪದೊಂದಿಗೆ ಕರ್ತವ್ಯನಿಷ್ಠೆ ಹೊಂದಿರುವ ಶಿಕ್ಷಕರನ್ನು ವಿದ್ಯಾರ್ಥಿಗಳು ಮೆಚ್ಚಿಕೊಳ್ಳುತ್ತಾರೆ ಮತ್ತು ಎಂದಿಗೂ ಮರೆಯುವುದಿಲ್ಲ. ಎಲ್ಲ ಶಿಕ್ಷಕರೂ ಹಾಗಾಗಲು ಪ್ರಯತ್ನಿಸಬೇಕು ಎಂದು ಹೇಳಿದರು.
ಕೋವಿಡ್ ಕಾರಣದಿಂದ ಭೌತಿಕ ತರಗತಿಗಳು ನಡೆಯದೆ, ಮಕ್ಕಳ ಶೈಕ್ಷಣಿಕ ಬೆಳವಣಿಗೆ ಕುಂಠಿತವಾಗಿದೆ. ಶಾಲೆ ಆರಂಭವಾದ ಒಂದು ವರ್ಷದೊಳಗೆ ಅದನ್ನು ಸಹಜ ಸ್ಥಿತಿಗೆ ತರಲು ಎಲ್ಲ ಶಿಕ್ಷಕರೂ ಶ್ರಮಿಸಬೇಕು ಎಂದು ಅವರು ಹೇಳಿದರು. ಶಿಕ್ಷಕರ ಮನವಿಗೆ ಸ್ಪಂದಿಸಿದ ಶಾಸಕರು, ಬೈಂದೂರಿನಲ್ಲಿ ಗುರು ಭವನ ನಿರ್ಮಿಸಲು ಕ್ಷೇತ್ರಾಭಿವೃದ್ಧಿ ನಿಧಿಯಿಂದ ಅನುದಾನ ನೀಡುವುದರ ಜತೆಗೆ ರೂ 50 ಸಾವಿರ ವೈಯಕ್ತಿಕ ದೇಣಿಗೆ ನೀಡುವುದಾಗಿ ಪ್ರಕಟಿಸಿದರು.
ಕಳೆದ ಸಾಲಿನಲ್ಲಿ ನಿವೃತ್ತರಾದ ಪ್ರಾಥಮಿಕ ಶಾಲಾ ಶಿಕ್ಷಕರಾದ ಆನಂದ ಶೆಟ್ಟಿ ಚಿತ್ತೂರು, ಶಶಿಧರ ಶೆಟ್ಟಿ ಯಳೂರುತೊಪ್ಲು, ಅನಂತಪದ್ಮನಾಭ ಬಿಜೂರು, ಜಾರ್ಜ್ ಬಸ್ರಿಬೇರು, ಪುಷ್ಪಲತಾ ಬಿಜೂರು, ಗಣಪತಿ ನಾಯ್ಕ್ ಮದ್ದೋಡಿ, ಲೀಲಾ ನಾವುಂದ, ಮಹಾದೇವ ಮಂಜ ರಾಗಿಹಕ್ಲು, ಅನಂತ ಅಡಿಗ ಅಂಡಾರುಕಟ್ಟೆ, ಬಾಬು ಬಿಲ್ಲವ ಬೇಟ್ರಿಯಾಣೆ, ಬಾಲಯ್ಯ ಶೇರುಗಾರ್ ಬಾಡ, ಜಯಂತ ಕೆರಾಡಿ, ನಾರಾಯಣ ಶೆಟ್ಟಿ ಬೋಳಂಬಳ್ಳಿ, ಸರೋಜಾ ಅರಮನೆಹಕ್ಲು, ವಾಸುದೇವ ಕೋಟೆಬಾಗಿಲು, ಶೀಲಾವತಿ ಕೊಡಪಾಡಿ, ವಿಧ್ಯಾಲತಾ ಹೆಗ್ಡೆ ಕರ್ಕಿ, ವೆಂಕಟರಮಣ ಶಾಸ್ತ್ರಿ ಮೊವಾಡಿ, ದೇವದಾಸ ಖಾರ್ವಿ ಮೊವಾಡಿ, ಚಂದ್ರಾವತಿ ಉಳ್ಳೂರು ಮಾವಿನಕಟ್ಟೆ, ಯಶೋದಾ ಶೆಟ್ಟಿ ಮುದೂರು, ಡೇರಿ ಸುವಾರಿಸ್ ನಾಡ, ಸಾವಿತ್ರಿ ಮಯ್ಯಾಡಿ, ಪ್ರೌಢಶಾಲಾ ಶಿಕ್ಷಕರಾದ ಗೋವಿಂದ ಬಿಲ್ಲವ ಕಿರಿಮಂಜೇಶ್ವರ, ಗಣಪತಿ ಶೇರುಗಾರ್ ಉಪ್ಪುಂದ, ರವೀಂದ್ರನಾಥ ಶೆಟ್ಟಿ ಖಂಬದಕೋಣೆ, ನಾಗರಾಜ ಹಕ್ಲಾಡಿ, ಮೋಹನದಾಸ ಶೆಟ್ಟಿ ಹೆಮ್ಮಾಡಿ, ಜವಾನ ನಾಗೇಶ ಹೆಮ್ಮಾಡಿ ಅವರನ್ನು ಗೌರವಿಸಲಾಯಿತು.
ತಹಶೀಲ್ದಾರ್ ಎಚ್. ಎಸ್. ಶೋಭಾಲಕ್ಷ್ಮೀ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ಎಂ. ಮುಂದಿನಮನಿ, ಬೈಂದೂರು ವಲಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶೇಖರ್ ಇದ್ದರು. ಶಿಕ್ಷಕರ ಗುರುತು ಚೀಟಿ ಬಿಡುಗಡೆ, ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ, ನೆರವಾದವರಿಗೆ ಗೌರವಾರ್ಪಣೆ ನಡೆದುವು. ವಲಯ ಸಂನ್ಮೂಲ ವ್ಯಕ್ತಿ ಕರುಣಾಕರ ಶೆಟ್ಟಿ ಸ್ವಾಗತಿಸಿದರು. ಕ್ಷೇತ್ರ ಸಮನ್ವಯಾಧಿಕಾರಿ ಅಬ್ದುಲ್ ರವೂಫ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಲಯ ಸಂಪನ್ಮೂಲ ವ್ಯಕ್ತಿಗಳಾದ ರಾಮಕೃಷ್ಣ ದೇವಾಡಿಗ, ಮಂಜುನಾಥ ಶೇರುಗಾರ್ ನಿವೃತ್ತ ಶಿಕ್ಷಕರನ್ನು ಪರಿಚಯಿಸಿದರು. ಮಂಜುನಾಥ ನಾಯ್ಕ್ ವಂದಿಸಿದರು. ಸುಧಾಕರ ದೇವಾಡಿಗ ನಿರೂಪಿಸಿದರು.
ಕುಂದಾಪುರ: ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಕುಂದಾಪುರ ಇವರ ವತಿಯಿಂದ ಕೋಟೇಶ್ವರ ಹಾಲಾಡಿ ರಸ್ತೆಯ ಕಂದಾವರ ಆಡಿಟೋರಿಯಂನಲ್ಲಿ ಭಾನುವಾರ ಕುಂದಾಪುರ ವಲಯದ ಶಿಕ್ಷಕರ ದಿನಾಚರಣೆ ನಡೆಯಿತು.
ಕುಂದಾಪುರ ಸಹಾಯಕ ಕಮಿಷನರ್ ಕೆ. ರಾಜು ಮಾತನಾಡಿ, ಕೊರೋನಾ ಮಹಾಮಾರಿಯ ಸಂದರ್ಭದಲ್ಲಿ ಶಿಕ್ಷಕರು ಆಯಾಯ ಜಿಲ್ಲೆಯ ಗಡಿಯಲ್ಲಿ ಕಾದು ಕೋವಿಡ್ ಸೋಂಕು ತಡೆಯುವಲ್ಲಿ ಸೈನಿಕರಂತೆ ಸಮರ್ಥವಾಗಿ ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ. ಶಾಲೆಗಳು ಆರಂಭವಾಗಲಿದ್ದು ಶಿಕ್ಷಕರು ಉತ್ತಮ ರೀತಿಯಲ್ಲಿ ಪೂರ್ವತಯಾರಿ ಮಾಡಿಕೊಂಡು ಯಾರೊಬ್ಬ ವಿದ್ಯಾರ್ಥಿಗೂ ಸಮಸ್ಯೆಯಾಗದಂತೆ ಕಾರ್ಯನಿರ್ವಹಿಸುವಂತಾಗಲಿ ಎಂದು ಹೇಳಿದರು.
2019-20 ಸಾಲಿನ ರಾಷ್ಟ್ರ ಪ್ರಶಸ್ತಿ ಭಾಜನರಾದ ತಾಲೂಕಿನ ಅಲ್ಬಾಡಿ-ಆರ್ಡಿ ಸರಕಾರಿ ಪ್ರೌಢಶಾಲೆ ನಿಯೋಜಿತ ಶಿಕ್ಷಕ ಸುರೇಶ್ ಮರಕಾಲ ಅವರನ್ನು ಎಸಿ ಕೆ. ರಾಜು ಅವರು ಸನ್ಮಾನಿಸಿದರು. ಇದೇ ಸಂದರ್ಭ ಸುದೀರ್ಘ ಸೇವೆ ಸಲ್ಲಿಸಿ ಈ ಶೈಕ್ಷಣಿಕ ವರ್ಷದಲ್ಲಿ ಸೇವಾ ನಿವೃತ್ತಿ ಹೊಂದಿದ ಶಿಕ್ಷಕರು, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದವರಿಗೆ ಸನ್ಮಾನಿಸಲಾಯಿತು. ಈ ಶೈಕ್ಷಣಿಕ ವರ್ಷದಲ್ಲಿ ಅಕಾಲಿಕ ಮರಣ ಹೊಂದಿದ ಶಿಕ್ಷಕರಿಗೆ ಮೌನಪ್ರಾರ್ಥನೆ ಮೂಲಕ ನುಡಿನಮನ ಸಲ್ಲಿಸಲಾಯಿತು.
ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್. ಪದ್ಮನಾಭ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಸದಾನಂದ ಬೈಂದೂರು ಸ್ವಾಗತಿಸಿದರು. ನಿವೃತ್ತ ಪ್ರಾಧ್ಯಾಪಕ ಹಯವದನ್ ಉಪಾಧ್ಯ ಶಿಕ್ಷಕ ದಿನಾಚರಣೆಯ ಪ್ರಧಾನ ಉಪನ್ಯಾಸ ನೀಡಿದರು. ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಚೆನ್ನಯ್ಯ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕುಂದಾಪುರ ತಾಲೂಕು ಅಧ್ಯಕ್ಷ ಗಣೇಶ್ ಕುಮಾರ್ ಶೆಟ್ಟಿ ಇದ್ದರು.
ಶಿಕ್ಷಣ ಸಂಯೋಜಕಿ ದೇವಕುಮಾರಿ ಮತ್ತು ಬಳಗ ಪ್ರಾರ್ಥಿಸಿ, ರೈತಗೀತೆ ಹಾಡಿದರು. ಶಿಕ್ಷಕರಾದ ಶಶಿಧರ್ ಶೆಟ್ಟಿ, ರಾಘವೇಂದ್ರ ಎಚ್. ಕಾರ್ಯಕ್ರಮ ನಿರೂಪಿಸಿದರು. ಕುಂದಾಪುರ ವಲಯ ಶಿಕ್ಷಣ ಸಂಯೋಜಕ ಸಂತೋಷ್ ಪೂಜಾರಿ ವಂದಿಸಿದರು.