ಎಲ್ಲರೊಂದಿಗೆ ಬೆರತು ಬದುಕುವಂತೆ ಮಾಡುವುದೇ ನಮ್ಮ ದೊಡ್ಡ ಜವಾಬ್ದಾರಿ: ಡಾ. ನಾಗತಿಹಳ್ಳಿ
ಕುಂದಾಪುರ: ಇಂದು ಪರಸ್ಪರ ಒಬ್ಬರಿಗೊಬ್ಬರು ಆತುಕೊಳ್ಳುತ್ತಾ, ಮೆಚ್ಚಿಕೊಳ್ಳುತ್ತಾ, ಪ್ರಾಮಾಣಿಕವಾಗಿ ವಿಮರ್ಷಿಸುತ್ತಾ ಮುಂದುವರಿಯಬೇಕಾದ ತುರ್ತು ಎದುರಾಗಿದೆ. ಎಲ್ಲರೂ ಬೆರೆತು ಬದುಕುವಂತೆ ಮಾಡುವುದೇ ನಮಗೂ ನಿಮಗೂ ಇರುವ ದೊಡ್ಡ ಜವಾಬ್ದಾರಿಯಾಗಿದೆ. ಅದರ ಅಗತ್ಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂಬುದನ್ನು ನಾವು ಸೂಕ್ಷ್ಮವಾಗಿ ಗಮನಿಸಬೇಕಿದೆ ಎಂದು ಖ್ಯಾತ ಸಾಹಿತಿ ಡಾ. ನಾಗತಿಹಳ್ಳಿ ಚಂದ್ರಶೇಖರ ಹೇಳಿದರು.
ಅವರು ಗುಲ್ವಾಡಿಯ ತೋಟದಮನೆಯಲ್ಲಿ ಗುಲ್ವಾಡಿ ಸಾಂಸ್ಕೃತಿಕ ಪ್ರತಿಷ್ಠಾನವು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸಹಕಾರದೊಂದಿಗೆ ಆಯೋಜಿಸಿದ ಕಾರ್ಯಕ್ರಮದಲ್ಲಿ ಪತ್ರಕರ್ತ ಸಂತೋಷಕುಮಾರ್ ಗುಲ್ವಾಡಿ ಸ್ಮಾಕರ ಕೊಡಮಾಡುವ ಗುಲ್ವಾಡಿ ಗೌರವ ಪುರಸ್ಕಾರವನ್ನು ಸ್ವೀಕರಿಸಿ ಮಾತನಾಡಿದರು.
ಪತ್ರಿಕೋದ್ಯಮದಲ್ಲಿ ಹೊಸತನವನ್ನು ತಂದ ಸಂತೋಷಕುಮಾರ್ ಗುಲ್ವಾಡಿ ಅವರ ಹೆಸರಿನ ಈ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವುದು ಖುಷಿ ನೀಡಿದೆ. ಎಷ್ಟೇ ದೇಶ ಸುತ್ತಿ ಬಂದರೂ ನಾವಿರುವ ಜಾಗವನ್ನು ಸಾಂಸ್ಕೃತಿಕ ಕೇಂದ್ರವನ್ನಾಗಿ ರೂಪಿಸುವುದು ಬಹಳ ಮುಖ್ಯವಾದುದು. ಆ ನಿಟ್ಟಿನಲ್ಲಿ ಯಾಕುಬ್ ಖಾದರ್ ಗುಲ್ವಾಡಿಯವರ ಪ್ರಯತ್ನ ಶ್ಲಾಘನೀಯ ಎಂದರು.
ಗುಲ್ವಾಡಿ ಗೌರವ ಪ್ರದಾನಿಸಿದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಮಾತನಾಡಿ ಕಾಲೇಜು ದಿನಗಳಿಂದಲೇ ನನ್ನ ಒಡನಾಡಿಯಾಗಿದ್ದ ಸಂತೋಷಕುಮಾರ್ ಗುಲ್ವಾಡಿ ಅವರ ಸಾಂಸ್ಕೃತಿಕ ಒಲವು ವಿಶೇಷವಾಗಿತ್ತು. ಸ್ವಯತ್ತತೆಯ ಹಸಿವು ಹೊಂದಿದ್ದ ಅವರು ಪತ್ರಿಕೋದ್ಯಮದಲ್ಲಿ ಒಂದು ಶ್ರೇಷ್ಠ ಮಾರ್ಗವನ್ನು ಸೃಷ್ಟಿಸಿದವರು. ಅವರು ಎಲೆಮರೆಯ ಕಾಯಿಯಂತಿದ್ದ ಅದೆಷ್ಟೋ ಪ್ರತಿಭಾವಂತರನ್ನು ಬೆಳಕಿಗೆ ತಂದವರಲ್ಲಿ ಗುಲ್ವಾಡಿ ಅಗ್ರಪಂಥಿಯಲ್ಲಿ ನಿಲ್ಲತ್ತಾರೆ ಎಂದು ತಮ್ಮ ಸ್ನೇಹದ ದಿನಗಳನ್ನು ನೆನಪಿಸಿಕೊಂಡರು.
ಪ್ರತಿಷ್ಠಾನದ ಪುರಸ್ಕಾರವನ್ನು ಅಕ್ಕ ಅಮೇರಿಕಾದ ಅಧ್ಯಕ್ಷ ಡಾ| ಹಳೆಕೋಟೆ ವಿಶ್ವಾಮಿತ್ರ, ಎಂ. ಸುಬ್ರಮಣಿ, ಜನಾಬ್ ಹರೆಕಳ್ ಹಾಜಬ್ಬ, ಡಾ| ವಿ. ನಾಗರಾಜು, ನಿಖಿಲ್ ಮಂಜೂ ಲಿಂಗಯ್ಯ ಅವರಿಗೆ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಯಾಕೂಬ್ ಖಾದರ್ ಗುಲ್ವಾಡಿ ಅವರ ಪ್ರವಾಸ ಕಥನ ’ನನ್ನ ಫಾರಿನ್ ಟೂರಿಂಗ್ ಟಾಕಿಸ್’ ಪುಸ್ತಕ ಬಿಡುಗಡೆಗೊಳಿಸಲಾಯಿತು. ಮಾಜಿ ಜಿಲ್ಲಾ ರೋಟರಿ ಗವರ್ನರ್ ಎ.ಎಸ್.ಎನ್. ಹೆಬ್ಬಾರ್ ಕೃತಿಯ ಪರಿಚಯ ಮಾಡಿದರು.
ಕಾರ್ಯಕ್ರಮದಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲ ಪೂಜಾರಿ, ಕಾರ್ಕಳದ ಮಾಜಿ ಶಾಸಕ ಗೋಪಾಲ ಭಂಡಾರಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಬಿ.ಎ. ಮೊಹಮ್ಮದ್ ಹನೀಫ್, ಗುಲ್ವಾಡಿ ಗ್ರಾ.ಪಂ ಅಧ್ಯಕ್ಷೆ ಸುಪ್ರಿತಾ, ಹಟ್ಟಿಯಂಗಡಿ ಸಿದ್ಧಿವಿನಾಯಕ ವಸತಿ ಶಾಲೆಯ ಪ್ರಾಂಶುಪಾಲ ಶರಣ್‌ಕುಮಾರ್, ಮಾವಿನಕಟ್ಟೆ ಅಲ್‌ಬದ್ರಿಯಾ ಜುಮ್ಮಾ ಮಸೀದಿಯ ಅಧ್ಯಕ್ಷ ಹಾಜಿ ಬಿ. ಎಂ. ಚೇರಿಯಬ್ಬ ಸಾಹೇಬ್, ಗುಲ್ವಾಡಿ ಮೆಹರಾಜ್ ಜುಮ್ಮಾ ಮಸೀದಿಯ ಅಧ್ಯಕ್ಷ ಜನಾಬ್ ಫಕೀರ್ ಹಸನಬ್ಬ, ಗುಲ್ವಾಡಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಜನಾಬ್ ಮೊಹಮ್ಮದ್ ಅಲಿ, ಜಯಪ್ರಕಾಶ್ ರಾವ್ ಪುತ್ತೂರು ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಪೂರ್ವದಲ್ಲಿ ಕನ್ನಡ ಹಾಗೂ ಬ್ಯಾರಿ ಭಾಷೆಯ ಜನಪದಗೀತೆಗಳನ್ನು ಹಾಡಿಲಾಯಿತು.
ಗುಲ್ವಾಡಿ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಧಾನ ಕಾರ್ಯನಿರ್ವಾಹಕ ಯಾಕೂಬ್ ಖಾದರ್ ಗುಲ್ವಾಡಿ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಗ. ನಾ. ಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.