ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಇತ್ತೀಚೆಗೆ ಬಹಳಷ್ಟು ಜನಪ್ರಿಯತೆ ಪಡೆದಿರುವ ‘ಮನಿಕೆ ಮಾಗೆ ಹಿತೆ’ ಎಂಬ ಶ್ರೀಲಂಕನ್ ಹಾಡೊಂದರ ಕವರ್ ವರ್ಷನ್ ಅನ್ನು ಆಳ್ವಾಸ್ ಪದವಿ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿ ಅಸೀಮ ದೋಳ ಅವರು ಹಾಡುವ ಮೂಲಕ ಯೂಟ್ಯೂಬ್ ನಲ್ಲಿ ಹೆಚ್ಚಿನ ವೀಕ್ಷಣೆ ಪಡೆದಿದ್ದಾರೆ.
ಇತ್ತೀಚೆಗೆ ಯೋಹಾನಿ ಹಾಗೂ ಸತೀಶನ್ ಎಂಬುವವರು ಇದೇ ಹಾಡಿನ ಕವರ್ ವರ್ಷನ್ ಹಾಡಿ 80 ಮಿಲಿಯನ್ಗೂ ಅಧಿಕ ವೀಕ್ಷಕರನ್ನು ಸೆಳೆದಿದ್ದರು. ಇದೀಗ ಅಸೀಮ ಅವರಿಂದ ಪ್ರೇರೇಪಿತರಾಗಿ ಈ ಹಾಡನ್ನು ಹಾಡಿದ್ದಾರೆ.
ಅಸೀಮ ಅವರ ಶ್ರೀಲಂಕಾದ ಸ್ನೇಹಿತೆಯರಾದ ತತ್ ಸರಣಿ ಮೆಂಡಿಸ್ ಹಾಗೂ ನಿಪುಣಿ ತಾರುಕ ಅವರ ಸಹಕಾರದೊಂದಿಗೆ ಹಾಡಿನ ಸಾಹಿತ್ಯವನ್ನು ಕಲಿತಿದ್ದಾರೆ. ಕವರ್ ಹಾಡಿನ ನಿರ್ದೇಶನವನ್ನು ಪ್ರಿಯಾಂಕ ಪೂಜಾರ್ ಅವರು ಮಾಡಿದ್ದು, ಗುಣೇಶ್ ಭಾರತೀಯ ಹಾಗೂ ಗ್ರೇಶಲ್ ಕಳಿಯಾಂಡ ಅವರು ಹಾಡಿನ ರೆಕಾರ್ಡಿಂಗ್ ಮತ್ತು ಚಿತ್ರೀಕರಣ ಮಾಡಿದ್ದಾರೆ.
ಯೂಟ್ಯೂಬ್ ಅಪ್ಲೋಡ್ ಆದ ಎರಡೇ ದಿನದಲ್ಲಿ 12 ಸಾವಿರ ವೀಕ್ಷಣೆ ಪಡೆದ ಹಾಡಿನ ಈ ಸಾಧನೆಯನ್ನು ಇದರ ಮೂಲ ಗಾಯಕರಾದ ದುಲ್ಹನ್ ಅವರು ತಮ್ಮ ಇನ್ಸ್ಟಾ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ. ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ, ಟ್ರಸ್ಟಿ ವಿವೇಕ್ ಆಳ್ವ, ಪ್ರಾಂಶುಪಾಲ ಡಾ. ಕುರಿಯನ್ ಹಾಗೂ ಮಾನವಿಕ ವಿಭಾಗದ ಡೀನ್ ಸಂಧ್ಯಾ ಕೆ. ಎಸ್. ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.