ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಳೆದ ಸುಮಾರು ಒಂದುವರೆ ವರ್ಷಗಳಿಂದ ಕೋವಿಡ್‌ನಿಂದ ವಿದ್ಯಾಕ್ಷೇತ್ರ ಬಡವಾಗಿದೆ. ಕೋವಿಡ್‌ನಿಂದ ಕಳೆಗುಂದಿರುವ ಶಿಕ್ಷಣ ಕ್ಷೇತ್ರವನ್ನು ಪುನರುತ್ಥಾನಗೊಳಿಸುವಲ್ಲಿ ಶಿಕ್ಷಕರ ಪ್ರಯತ್ನ ಬಹುಮುಖ್ಯವಾಗಿದೆ. ಇದಕ್ಕಾಗಿ ಶಿಕ್ಷಕರು ವಿಶೇಷ ಹೋರಾಟ ನಡೆಸಬೇಕಾಗಿದೆ. ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಿ ವಿದ್ಯಾಭ್ಯಾಸ ನಡೆಸಲು ಸಹಕರಿಸಬೇಕು. ಶಾಲೆಗಳಲ್ಲಿ ಅಧ್ಯಾಪಕರು ವಿಶೇಷ ಶ್ರಮವಹಿಸಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಮುಂದಾಗಬೇಕು ಎಂದು ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಹೇಳಿದರು.
ಬೈಂದೂರು ವಲಯದ ಗುಜ್ಜಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಮಾಧ್ಯಮ ತರಗತಿಗಳನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು ೧೦ ಶಾಲೆಗಳಲ್ಲಿ ಶಿಕ್ಷಕರಿಲ್ಲ. ಹೀಗಾಗಿ ಡಿಡಿಪಿಐ ಮತ್ತು ಬಿಇಒ ಸಭೆ ನಡೆಸಿ ಶಿಕ್ಷಕರ ಕೊರತೆಯಿರುವ ಶಾಲೆಗಳಲ್ಲಿ ಮತ್ತು ಶಾಲೆಗಳಲ್ಲಿರುವ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರನ್ನು ನಿಯೋಜಿಸಲು ಸೂಚನೆ ನೀಡಲಾಗಿದೆ. ಬೈಂದೂರು ಕ್ಷೇತ್ರದಲ್ಲಿ ಐದು ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿಗಳನ್ನು ಪ್ರಾರಂಭಿಸಲು ಸರಕಾರ ಅನುಮತಿ ನೀಡಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿಗಳನ್ನು ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದರು.
ಗುಜ್ಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಯಮುನಾ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಇಲಾಖೆಯ ಸುಧಾಕರ ದೇವಾಡಿಗ, ಸುರೇಂದ್ರ ನಾಯಕ್, ಜಿಪಂ ಮಾಜಿ ಸದಸ್ಯೆ ಶೋಭಾ ಜಿ.ಪುತ್ರನ್, ತಾಪಂ ಮಾಜಿ ಸದಸ್ಯ ನಾರಾಯಣ ಕೆ.ಗುಜ್ಜಾಡಿ, ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷ ದೀಪಕಕುಮಾರ್ ಶೆಟ್ಟಿ, ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ಉಮೇಶ ಮೇಸ್ತ, ಪ್ರಧಾನ ಕಾರ್ಯದರ್ಶಿ ರಾಜೀವ ಶ್ರೀಯಾನ್, ಗ್ರಾಪಂ ಉಪಾಧ್ಯಕ್ಷ ರಾಜು ಪೂಜಾರಿ, ಸದಸ್ಯರಾದ ಹರೀಶ ಮೇಸ್ತ, ಶೇಖರ ದೇವಾಡಿಗ, ಶ್ರೀಧರ, ತುಂಗಾ ಪೂಜಾರಿ, ಭಾರತಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಕಾಶ ಪೂಜಾರಿ, ಎಸ್‌ಡಿಎಂಸಿ ಉಪಾಧ್ಯಕ್ಷ ಮಹೇಶ ಆಚಾರ್ಯ, ಮಾಜಿ ಅಧ್ಯಕ್ಷ ರಾಮನಾಥ ಚಿತ್ತಾಲ್, ಕವಿತಾ ಗಾಣಿಗ ಮತ್ತಿತರರು ಉಪಸ್ಥಿತರಿದ್ದರು.
ಶಾಲೆಯ ಮುಖ್ಯ ಶಿಕ್ಷಕ ಆನಂದ ಜಿ. ಸ್ವಾಗತಿಸಿದರು. ಬೈಂದೂರು ವಲಯ ಕ್ಷೇತ್ರ ಸಮನ್ವಯಾಧಿಕಾರಿ ಅಬ್ದುಲ್ ರವೂಫ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹಶಿಕ್ಷಕಿಯರಾದ ಮಾಧವಿ ಮತ್ತು ಸುಮನಾ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕ ವಿಶ್ವನಾಥ ವಂದಿಸಿದರು.