ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಯಕ್ಷಗಾನ ಕಲಾವಿದರು ಸಂಘಟಿತ ಹೊಸ ಟ್ರಸ್ ಹುಟ್ಟುಹಾಕಿದ್ದು, ಟ್ರಸ್ಟ್ ಯಕ್ಷಗಾನ ಕಲಾವಿದರು ಮಾತ್ರ ಒಳಗೊಳ್ಳದೆ ಕಾರ್ಮಿಕರು ಸೇರಿಸಿಕೊಂಡಿರುವುದು ಧನಾತ್ಮಕ ಬೆಳವಣಿಗೆ. ಯಾವುದೇ ಸಂಘಟನೆ ಅಥವಾ ಟ್ರಸ್ಟ್ ಹುಟ್ಟು ಸಂಘರ್ಷಕ್ಕಲ್ಲಾ ಬದಲಾಗಿ ಸಮಾಜದೊಟ್ಟಿಗೆ ಸೇರಿ ಸೌಹಾರ್ಧತೆಗೆ ದಾರಿಯಾಗಬೇಕು. ಟ್ರಸ್ಟ್ ಮೂಲಕ ಕಲಾವಿದರಿಗೆ, ಕಾರ್ಮಿಕರಿಗೆ ನ್ಯಾಯ, ಅವರ ಕಷ್ಟಸುಖದಲ್ಲಿ ಭಾಗಯಾಗಬೇಕು ಎಂದು ಹೋಟೆಲ್ ಉದ್ಯಮಿ ಕೃಷ್ಣಮೂರ್ತಿ ಮಂಜ ಹೇಳಿದರು.
ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಶ್ರೀ ಬ್ರಹ್ಮಲಿಂಗೇಶ್ವರ ಕಲಾವಿದರ ಕಾರ್ಮಿಕರ ಹಿತರಕ್ಷಣಾ ಯಕ್ಷಕಲಾ ಟ್ರಸ್ಟ್ ಉದ್ಘಾಟಿಸಿ ಮಾತನಾಡಿ, ಟ್ರಸ್ಟ್ ಕಲಾವಿದರ ಶ್ರೇಯಸ್ಸಿನ ಜೊತೆ ಯಕ್ಷಗಾನ ಸಂಪ್ರದಾಯಕ್ಕೆ ಧಕ್ಕೆ ಬಾರದಂತೆ ಮುಂದುವರಿಸುವ ಹೊಣೆ ಕೂಡಾ ಹೊರಬೇಕು ಎಂದು ಸಲಹೆ ಮಾಡಿದರು.
ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಅನುವಂಶೀಯ ಮೊಕ್ತೇಸರ ಸದಾಶಿವ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ, ಸದಸ್ಯ ಡಾ.ಅತುಲ್ ಕುಮಾರ್ ಶೆಟ್ಟಿ, ಮಾಜಿ ಸದಸ್ಯ ವಂಡಬಳ್ಳಿ ಜಯರಾಮ ಶೆಟ್ಟಿ ಮಾತನಾಡಿದರು.
ಕುಂದಾಪುರ ಡಾ. ಬಿ. ಬಿ.ಹೆಗ್ಡೆ ಸಾರ್ವಜನಿಕ ಸಂಪರ್ಕ ಅಧಿಕಾರಿ ನಾಗರಾಜ ಶೆಟ್ಟಿ ನೈಕಂಬ್ಳಿ, ಶ್ರೀ ಬ್ರಹ್ಮಲಿಂಗೇಶ್ವರ ಕಲಾವಿದರ ಕಾರ್ಮಿಕರ ಹಿತರಕ್ಷಣಾ ಯಕ್ಷಕಲಾ ಟ್ರಸ್ಟ್ ಕಲಾವಿದರ ಮಕ್ಕಳ ಪಿಯುಸಿ, ಪದವಿ ಶಿಕ್ಷಣಕ್ಕೆ ಪ್ರೇರಣಾ ನೈಕಂಬ್ಳಿ ಸಂಸ್ಥೆ ಮೂಲಕ ದತ್ತು ಪಡೆದು ಪ್ರೋತ್ಸಾಹ ನೀಡಲು ನಿರ್ಧರಿಸಿದ್ದಾರೆ.
ಈ ಸಂದರ್ಭ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಉದ್ಯಮಿ ಶಂಕರ ಭಟ್ ಮಾರಣಕಟ್ಟೆ, ಟ್ರಸ್ಟ್ ಕಾನೂನು ಸಲಹೆಗಾರ ಶರತ್ ಕುಮಾರ್ ಶೆಟ್ಟಿ ಯಳೂರು, ಪತ್ರಕರ್ತ ಶ್ರೀಪತಿ ಹೆಗಡೆ ಹಕ್ಲಾಡಿ, ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಅರ್ಚಕ ವಿಘ್ನೇಶ್ವರ ಮಂಜ, ಮಂಜಯ್ಯ ಶೆಟ್ಟಿ ಚಿತ್ತೂರು, ಕೆಂಚನೂರು ಗ್ರಾಪಂ ಸದಸ್ಯ ರವಿ ಕೆಂಚನೂರು, ಯಕ್ಷಪ್ರೇಮಿ ಜಯರಾಮ ಶೆಟ್ಟಿ ಹೊಸೂರು, ಸ್ಥಳದಾನಿ ರಾಮಚಂದ್ರ ಮಂಜ ಮಾರಣಕಟ್ಟೆ, ಟ್ರಸ್ಟ್ ಅಧ್ಯಕ್ಷ ಐರ್‌ಬೈಲ್ ಆನಂದ ಶೆಟ್ಟಿ, ಪ್ರಧಾನ ಕಾರ‍್ಯದರ್ಶಿ ಸುರೇಂದ್ರ ಆಲೂರು ಇದ್ದರು.
ಕಲಾವಿದ ಸಂಜೀವ ಶೆಟ್ಟಿ ಸ್ವಾಗತಿಸಿದರು. ಟ್ರಸ್ಟ್ ಸಲಹೆಗಾರ ಆನಂತ ಹೆಗಡೆ ನಿಟ್ಟೂರು ಪ್ರಾಸ್ತಾವಿಕ ಮಾತನಾಡಿದರು. ಕೆ.ರಾಘುವೇಂದ್ರ ರಟ್ಟಾಡಿ ನಿರೂಪಿಸಿ, ವಂದಿಸಿದರು.
ಕಲಾವಿದರ ಜೀವನ ಪದ್ದತಿ ಅಸ್ವಾಭಾವಿಕವಾಗಿದ್ದು, ಬದುಕು ಅಭದ್ರತೆಯಿಂದ ಕೂಡಿದೆ. ಸಂಘಟನೆ ಸಮಾರಸ್ಯಕ್ಕೆ ಹೊರತು ಸಂಘರ್ಷಕ್ಕಲ್ಲ. ಯಕ್ಷಗಾನ ಕಲಾವಿದರು ಸಮಾಜದಿಂದ ಸಾಕಷ್ಟು ಪಡೆದಿದ್ದು, ಸಮಾಜಕ್ಕೆ ಕಿಂಚಿತ್ ಸೇವೆ ಮಾಡುವ ಉದ್ದೇಶದಲ್ಲಿ ಕಲಾವಿದರ, ಕಾರ್ಮಿಕರ ಟ್ರಸ್ಟ್ ಜನ್ಮತಾಳಿದೆ. ಟ್ರಸ್ಟ್ ದೇವಸ್ಥಾನ ಆಡಳಿತ ಮಂಡಳಿ ಜೊತೆ ಸೌಹಾರ್ಧವಾಗಿ ವ್ಯವಹಸರಿಸಲಿದ್ದು, ದೇವಸ್ತಾನ ಸೇವಾ ಕಾರ‍್ಯದಲ್ಲೂ ಟ್ರಸ್ಟ್ ಸದಸ್ಯರು ಕೈಜೋಡಿಸಲಿದ್ದು, ಆಡಳಿತ ಮಂಡಳಿ ಸಹಕಾರ ನೀಡಲಿ. – ಆರ್.ಆನಂತ ಹೆಗಡೆ, ಹಿರಿಯ ಯಕ್ಷಗಾನ ಕಲಾವಿದೆ