ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸ್ವಚ್ಚತೆಗಾಗಿ ರಾಷ್ಟ್ರ, ರಾಜ್ಯಮಟ್ಟದ ಪ್ರಶಸ್ತಿ ಹಿಂದೆ ಪೌರಕಾರ್ಮಿಕರ ಪರಿಶ್ರಮವಿದೆ. ಗಡಿಯಲ್ಲಿ ಯೋಧರು ನಮ್ಮ ರಕ್ಷಿಸಿದರೆ, ಪೌರ ಕಾರ್ಮಿಕರು ಸ್ವಚ್ಛತೆ ಮೂಲಕ ನಮ್ಮ ರಕ್ಷಿಸುತ್ತಿದ್ದಾರೆ. ಸುಂದರ ಕುಂದಾಪುರ ನಿರ್ಮಾತೃಗಳು ಪೌರಕಾರ್ಮಿಕರು. ಅವರ ಸೇವೆ ಬೆಲೆ ಕಟ್ಟಲಾಗದು. ಪೌರ ಕಾರ್ಮಿಕರ ದಿನದಂದು ಸ್ಮರಿಸುವ ಮೂಲಕ ಕೃತಜ್ಞರಾಗೋಣ ಎಂದು ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.
ಕುಂದಾಪುರ ಪುರಸಭೆ ಆಶ್ರಯದಲ್ಲಿ ಇಲ್ಲಿನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಭವನದಲ್ಲಿ ನಡೆದ ಪೌರ ಕಾರ್ಮಿಕರ ದಿನಾಚರಣೆ, ಸನ್ಮಾನ ಹಾಗೂ ಬೀಳ್ಕೊಡುಗೆಯಲ್ಲಿ ಮಾತನಾಡಿದರು. ಪುರಸಭೆ 18 ದಿನಗೂಲಿ ನೌಕರರ ಖಾಯಂ ಮಾಡಿದ್ದು, ಇನ್ನು 12 ಜನರ ಸೇವಾ ನೇಮಕ ಬಾಕಿಯಿದೆ. ಸಮಚಿತ್ತ, ಸಮರ್ಪಣಾ ಭಾವ ಪುರಕಾರ್ಮಿಕರಲ್ಲಿದ್ದು, ಅಂಬೇಡ್ಕರ್ ಕಾಲನಿ ೮ ಕುಟುಂಬಕ್ಕೆ ಜಾಗದ ಹಕ್ಕುಪತ್ರ ಸಿಕ್ಕಿದ್ದು, ಉಳಿದವರಿಗೂ ಹಕ್ಕುಪತ್ರ ನೀಡುವ ಜೊತೆ ತುರ್ತು ಮನೆ ನಿರ್ಮಾಣಕ್ಕೆ ಪುರಸಭೆ 50 ಸಾವಿರ ಮುಂಗಡ ಹಣ ಕೊಡುವ ನಿರ್ಧಾರ ಮಾಡಿದ ಎಂದು ಹೇಳಿದರು.
ಪುರಸಭೆ ಅಧ್ಯಕ್ಷ ವೀಣಾ ಭಾಸ್ಕರ ಮೆಂಡನ್ ಪೌರ ಕಾರ್ಮಿಕ ದಿನಾಚರಣೆ ಉದ್ಘಾಟಿಸಿದರು. ಉಪಾಧ್ಯಕ್ಷ ಸಂದೀಪ ಖಾರ್ವಿ, ಸ್ಥಾಯಿ ಸಮಿತಿ ಅಧ್ಯಕ್ಷ ಶೇಖರ ಪೂಜಾರಿ, ಪುರಸಭೆ ವಿರೋಧ ಪಕ್ಷ ನಾಯಕಿ ದೇವಕಿ ಪಿ.ಸಣ್ಣಯ್ಯ, ಪೌರ ಕಾರ್ಮಿಕ ಸಂಘ ಜಿಲ್ಲಾಧ್ಯಕ್ಷ ನಾಗರಾಜ ಇದ್ದರು. ಪುರಸಭೆ ಮಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ ಸಾರ್ವಜನಿಕರ ಪರವಾಗಿ ಮಾತನಾಡಿದರು.
ಪೌರ ಕಾರ್ಮಿಕರಾದ ದಿನೇಶ್, ಕಿರಣ್ ಕಂಬಳಿ, ಬೋಪಣ್ಣ ರಾಮಪ್ಪ ಭಜಂತ್ರಿ, ಮಹಾದೇವಿ, ಶಿವರಾಜ್ ಕುಮಾರ್, ಪ್ರಶಾಂತ್ ಕೆ, ಅರುಣ್, ಶಂಕರ್ ಅವರ ಸನ್ಮಾನಿಸಲಯಿತು. ಕುಂದಾಪುರ ಪುರಸಭೆಯಿಂದ ಬಂಟ್ವಾಳಕ್ಕೆ ವರ್ಗಾವಣೆಯಾದ ಆರೋಗ್ಯಾಧಿಕಾರಿ ಶರತ್ ಖಾರ್ವಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಪೌರ ಕಾರ್ಮಿಕ ಗೋಪಿ ಪ್ರಾರ್ಥಿಸಿದರು. ಕಿರಿಯ ಆರೋಗ್ಯ ನಿರೀಕ್ಷಕ ರಾಘವೇಂದ್ರ ಎಂ.ನಾಯ್ಕ್ ಸ್ವಾಗತಿಸಿದರು. ಕಚೇರಿ ಸಿಬ್ಬಂದಿ ಗಣೇಶ್ ಜನ್ನಾಡಿ ನಿರೂಪಿಸಿ, ವಂದಿಸಿದರು.