ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅಮೇರಿಕಾ ಪ್ರವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಾಷಿಂಗ್ಟನ್‌ನಲ್ಲಿದ್ದ ಮೂರು ದಿನಗಳ ಕಾಲ ಊಟೋಪಚಾರ ಸಹಿತ ಅವರ ಆತಿಥ್ಯದ ನೇತೃತ್ವವನ್ನು ತಾಲೂಕಿನ ಆಲೂರು ಮೂಲದ ಹೋಟೆಲ್ ಉದ್ಯಮಿ ಅನಂದ ಪೂಜಾರಿ ಅವರು ವಹಿಸಿದ್ದರು.
ಆಲೂರು ಗ್ರಾಮದ ಕಲ್ಲಂಗಡಿ ಮನೆ ಬಡಿಯ ಪೂಜಾರಿ ಹಾಗೂ ಗಿರಿಜಾ ದಂಪತಿಗಳ ಪುತ್ರರಾದ ಆನಂದ ಪೂಜಾರಿ ಅವರು ಪತ್ನಿ ಸುಮಿತಾ ಅವರೊಂದಿಗೆ ವಾಷಿಂಗ್ಟನ್ ಡಿಸಿಯಲ್ಲಿ ಕಳೆದ 35 ವರ್ಷಗಳಿಂದ ನೆಲೆಸಿದ್ದು, 25 ವರ್ಷಗಳಿಂದ ವುಡ್‌ಲ್ಯಾಂಡ್ಸ್ ಹೋಟೆಲ್‌ನ್ನು ನಡೆಸುತ್ತಿದ್ದಾರೆ.
ಅನಿವಾಸಿ ಭಾರತೀಯ ಆನಂದ ಪೂಜಾರಿ ಹಾಗೂ ಸುಮಿತಾ ದಂಪತಿಗಳು ಶುಕ್ರವಾರ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುವ ಅವಕಾಶ ಪಡೆದಿದ್ದರು. ಭಾರತದಿಂದ ಅಮೇರಿಕಾಕ್ಕೆ ಕೇಂದ್ರ ಸಚಿವರು ಸಹಿತ ಗಣ್ಯರು ಭೇಟಿ ನೀಡಿದರೆ ಅವರಿಗೆ ಆನಂದ ಪೂಜಾರಿ ಅವರ ಹೋಟೆಲ್ ಮೂಲಕವೇ ಆತಿಥ್ಯ ನೀಡಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇದು ಮೂರನೇ ಭಾರಿಗೆ ಆತಿಥ್ಯ ನೀಡಲಾಗುತ್ತಿದ್ದು, ನಾಲ್ಕನೇ ಭಾರಿಗೆ ಪ್ರಧಾನಿಯವರನ್ನು ಭೇಟಿಯಾಗುತ್ತಿದ್ದಾರೆ.
ಅಮೇರಿಕಾದ ಗ್ರೀನ್‌ಕಾರ್ಡ್ ಪಡೆದಿರುವ ಆನಂದ ಪೂಜಾರಿ – ಸುಮಿತಾ ದಂಪತಿಗಳು ಆಹಾರೋದ್ಯಮ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ್ದು, ಅಮೇರಿಕಾದ ಮಾಜಿ ಅಧ್ಯಕ್ಷ ಒರಾಕ್ ಓಬಮಾ ಸೇರಿದಂತೆ ಹಲವು ಗಣ್ಯರು ಇವರ ಹೋಟೆಲ್‌ಗೆ ಆಗಾಗ್ಗೆ ಭೇಟಿ ನೀಡುತ್ತಲೇ ಇರುತ್ತಾರೆ.