ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಗೌರವ ಡಾಕ್ಟರೇಟ್ ಪದವಿ ಪಡೆದ ಪ್ರಸಿದ್ಧ ಜಾನಪದ ಕಲಾವಿದ ಗಣೇಶ ಗಂಗೊಳ್ಳಿ ಅವರನ್ನು ಡಾ.ಬಿ.ಆರ್.ಅಂಬೇಡ್ಕರ್ ಯುವಕ ಮಂಡಲ ಮೇಲ್‌ಗಂಗೊಳ್ಳಿ, ಅಮೃತಾ ಯುವತಿ ಮಂಡಲ ಮತ್ತು ಅರ್ಚನಾ ಮಹಿಳಾ ಮಂಡಲ ಮೇಲ್‌ಗಂಗೊಳ್ಳಿ ಇವರ ಆಶ್ರಯದಲ್ಲಿ ಗಂಗೊಳ್ಳಿ ಮೇಲ್‌ಗಂಗೊಳ್ಳಿಯ ಡಾ.ಅಂಬೇಡ್ಕರ್ ಭವನದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಗಣೇಶ ಗಂಗೊಳ್ಳಿ, ಕಲಾವಿದ ಬೆಳೆಯಬೇಕಾದರೆ ಸಂಘ ಸಂಸ್ಥೆಗಳ, ಕಲಾಭಿಮಾನಿಗಳ ಸಹಕಾರ ಪ್ರೋತ್ಸಾಹ ಬೇಕಿದೆ. ಪೋಷಕರು ತಮ್ಮ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ನೀಡಬೇಕು ಎಂದರು.
ಡಾ. ಬಿ. ಆರ್. ಅಂಬೇಡ್ಕರ್ ಯುವಕ ಮಂಡಲದ ಅಧ್ಯಕ್ಷ ಅಕ್ಷಯ್ ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ ಖಾರ್ವಿ, ಅಮೃತಾ ಯುವತಿ ಮಂಡಲದ ಅಧ್ಯಕ್ಷೆ ವೇದಾವತಿ ಉಪಸ್ಥಿತರಿದ್ದರು. ಯುವಕ ಮಂಡಲದ ಗೌರವಾಧ್ಯಕ್ಷ ಭಾಸ್ಕರ ಎಚ್.ಜಿ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಯುವತಿ ಮಂಡಲದ ಕಾರ್ಯದರ್ಶಿ ಅನಿತಾ ಕಾರ್ಯಕ್ರಮ ನಿರ್ವಹಿಸಿದರು. ಕ್ರೀಡಾ ಕಾರ್ಯದರ್ಶಿ ಸಹನಾ ವಂದಿಸಿದರು.