ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಉದ್ಯೋಗದೊಂದಿಗೆ ಮನೆಯ ಕೆಲಸದಲ್ಲಿಯೂ ತೊಡಗಿಸಿಕೊಂಡ ಮಹಿಳೆ ಒತ್ತಡದಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಟೀಕೆಗಳಿಗೆ ಗಮನ ಕೊಡದೇ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು, ಹಿಂಜರಿಕೆ ಕಾಣದೇ, ತಾಳ್ಮೆ, ಸಹನೆಯಿಂದ ಮುನ್ನುಗ್ಗುವಂತ ಮನೋಭಾವನೆ ಬೆಳೆಸಿಕೊಳ್ಳಬೇಕು. ಎಲ್ಲಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸ್ವಾವಲಂಬನೆಯತ್ತಾ ಮಹಿಳೆಯರು ದಿಟ್ಟ ಹೆಜ್ಜೆಯನ್ನಿಡಬೇಕು, ಮಹಿಳೆಯರಿಗೂ ಜ್ಞಾನ ಪೀಠ ಪ್ರಶಸ್ತಿ ದೊರಕಬೇಕು ಎಂದು ಶಿಕ್ಷಕಿ ಹಾಗೂ ಸಾಹಿತಿ ಸುಮಿತ್ರ ಐತಾಳ್ ಹೇಳಿದರು.
ಅವರು ಕೋಟ ಡಾ.ಕಾರಂತ ಥೀಂ ಪಾರ್ಕ್ನಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್, ಡಾ.ಶಿವರಾಮ ಕಾರಂತ ಟ್ರಸ್ಟ್,(ರಿ) ಉಡುಪಿ, ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಟಾನದ (ರಿ)ಕೋಟ ಸಹಯೋಗದಲ್ಲಿ ನಡೆದ ಉಡುಪಿ ಜಿಲ್ಲಾ ಮಹಿಳಾ ಸಾಹಿತ್ಯ ಸಾಂಸ್ಕೃತಿಕ ಸಮ್ಮೇಳನ, ಮಣೂರು ಅಶ್ವಿನಿ ಮಧ್ಯಸ್ಥ ಸ್ಮಾರಕ ಸಾಧನಾ ಶ್ರೀ ಮಹಿಳಾ ಪುರಸ್ಕಾರ ಪ್ರದಾನ ಸಮಾರಂಭ ಭಾವಗಾನ-2021(ಸಾಧನೆಯ ತಿಲ್ಲಾನ) ಕಾರ್ಯಕ್ರಮದ ಸಮ್ಮೇಳನಾಧ್ಯಕ್ಷೆ ನೆಲೆಯಲ್ಲಿ ಮಾತನಾಡಿದರು.
ಹೆಣ್ಣಿನ ನೋವು ಸಾಹಿತ್ಯದಲ್ಲಿ ಅನಾವರಣ
ಚಲನಶೀಲತೆ ಜೀವಂತಿಕೆ ಗುಣ, ನಿಸರ್ಗದ ಹೊಂದಾಣಿಕೆಯಂತೆ ಕಾಲ ಉರುಳುತ್ತದೆ. ಅದಕ್ಕೆ ತಡೆಯಂಬುದಿಲ್ಲ ಅಂತಹ ಪ್ರಭಾವ ಶಾಲಿಯಾದರೂ ಕಾಲಚಕ್ರದ ಎದುರು ತಲೆಬಾಗಲೇಬೇಕು ಆಯಾ ಕಾಲದಲ್ಲಿ ನಡೆದ ಪ್ರತಿಯೊಂದು ಘಟನೆಯೂ ಕಾಲ ಉರುಳಿದಂತೆ ಇತಿಹಾಸವಾಗುತ್ತಾ ಹೋಗುತ್ತದೆ. ನೊಂದ ಜೀವನವನ್ನು ನೊಂದವರೇ ಬಲ್ಲರು ಎಂಬಂತೆ ಹೆಣ್ಣು ಒಳಸಂಕಟಗಳನ್ನು ಸಾರ್ವಜನಿಕವಾಗಿ ಹೇಳಿಕೊಳ್ಳಲು ಸಾಧ್ಯವಾಗಲ್ಲ ಇಂದು ಮಹಿಳಾ ಲೇಖಕಿಯರಿಂದ ಸಾಹಿತ್ಯದಲ್ಲಿ ಇಂದು ಅಭಿವ್ಯಕ್ತಗೊಳ್ಳುತ್ತಿದೆ ಎಂದರು
ಮಹಿಳೆಯರು ಸಂಘಟನೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಿ
ಪುರುಷರಿಗೆ ಸರಿಸಮಾನವಾಗಿ ಇಂದು ಮಹಿಳೆ ಸಾಹಿತ್ಯ ಕ್ಷೇತ್ರದಲ್ಲಿ ಅವಕಾಶ ಕಲ್ಪಿಸಿಕೊಳ್ಳಲು ಮತ್ತು ಪ್ರಬುದ್ಧ ಚಿಂತನೆಗಳನ್ನು ಬೆಳೆಸಲು ಸಂಘಟನೆಗಳು ಅಗತ್ಯ ಇಂದು ಮಹಿಳೆ ಎಲ್ಲ ಕ್ಷೇತ್ರಗಳಲ್ಲಿಯೂ ಸಂಘಟಿತಳಾಗಿ ಸಾಧನೆ ತೋರುತ್ತಿದ್ದಾಳೆ. ಅದೇ ರೀತಿ ಸಾಹಿತ್ಯ ಕ್ಷೇತ್ರದಲ್ಲಿಯೂ ಸಂಘಟಿತರಾಗಬೇಕು.ಇದರಿಂದ ಮಹಿಳೆ ಸಾಹಿತ್ಯ ಕ್ಷೇತ್ರದಲ್ಲೂ ಬೆಳೆಯಲು ಸಾಧ್ಯ ಎಂದು ಕಾರ್ಯಕ್ರಮ ಉದ್ಘಾಟಿಸಿ ಸಾಂಸ್ಕೃತಿಕ ಚಿಂತಕಿ ಸುಧಾ ಮಣೂರು ಕದ್ರಿಕಟ್ಟು ಹೇಳಿದರು.
ಸಾಧಕ ಮಹಿಳೆಯರಿಗೆ ಸನ್ಮಾನ
ಸಮಾರಂಭದಲ್ಲಿ ಕೋಟೇಶ್ವರದ ಸುಮಿತ್ರಾ ಐತಾಳ್, ಸಂಧ್ಯಾ ಲಕ್ಷ್ಮಣ್ ಆಚಾರ್ಯ, ಮಂಜುಳಾ ತೆಕ್ಕಟ್ಟೆ, ಚಂದ್ರಿಕಾ ಧನ್ಯ, ಕಲ್ಪನಾ ಭಾಸ್ಕರ್, ಅಮಿತ ಪ್ರಕಾಶ್ ಕ್ರಮಧಾರಿ, ವಿನಂತಿ ಶೆಟ್ಟಿ ಕೋಟೇಶ್ವರ, ರೇವತಿ ಪ್ರಭಾಕರ ಗಾಣಿಗ ಮತ್ತು ಗೀತಾ ಮರಕಾಲ ಅವರಿಗೆ ಅಶ್ವಿನಿ ಸ್ಮಾರಕ ಸಾಧನ ಶ್ರೀ ಮಹಿಳಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಪ್ರಗತಿಪರ ಕೃಷಿಕ ರವೀಂದ್ರ ಐತಾಳ, ಥೀಂ ಪಾರ್ಕ್ನ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ, ಕೋಟತಟ್ಟು ಗ್ರಾಮ ಪಂಚಾಯಿತಿ ಸದಸ್ಯ ಸತೀಶ್ ಬಾರಿಕೆರೆ, ದಿನೇಶ್ ಆಚಾರ್ಯ ಉಪಸ್ಥಿತರಿದ್ದರು.
ಟ್ರಸ್ಟ್ ನ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಪ್ರಾಸ್ತಾವಿಕವಾಗಿ ಮಾತನಾಡಿದರು ಥೀಮ್ ಪಾರ್ಕ್ ಮೇಲ್ವಿಚಾರಕ ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು.ಪಂಚಾಯತ್ ಸದಸ್ಯೆ ವಿದ್ಯಾ ಸಾಲಿಯಾನ್ ವಂದಿಸಿದರು. ನಂತರ ಬಹುವಿಧ ಗೋಷ್ಟಿ, ನನ್ನ ಕಥೆ ನಿಮ್ಮ ಜೊತೆ ಮಾತುಕತೆ ಕಾರ್ಯಕ್ರಮಗಳು ನಡೆಯಿತು.