ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ನಂಜನಗೂಡಿನ ಪುರಾತನ ಹಿಂದೂ ದೇವಾಲಯ ಸೇರಿದಂತೆ ವಿವಿಧ ಧಾರ್ಮಿಕ ಕೇಂದ್ರಗಳನ್ನು ಬಿಜೆಪಿ ಸರಕಾರ ಕೆಡುವುತ್ತಿದ್ದ ಎಂದು ಆಪಾದಿಸಿ ಬೈಂದೂರು ಯುವ ಕಾಂಗ್ರೆಸ್ ನೇತೃತ್ವದಲ್ಲಿ ಸೋಮವಾರ ಪಂಜಿನ ಮೆರವಣಿಗೆ ನಡೆಯಿತು. ಹೊಸ ಬಸ್ ನಿಲ್ದಾಣದಿಂದ ಸೇನೇಶ್ವರ ದೇವಸ್ಥಾನದ ತನಕ ಪಂಜಿನ ಮೆರವಣಿಗೆ ನಡೆಸಿ ಬಿಜೆಪಿ ಸರಕಾರದ ನೀತಿ-ಧೋರಣೆಯನ್ನು ಖಂಡಿಸಲಾಯಿತು.
ಬಳಿಕ ನಡೆದ ಸಭೆಯನ್ನುದ್ದೇಶಿಸಿ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಅವರು ಮಾತನಾಡಿ ಜಾತಿ ಧರ್ಮಗಳ ನಡುವೆ ವಿಷಬೀಜ ಬಿತ್ತಿ ತನ್ನ ಬೇಳೆ ಬೇಯಿಸಿಕೊಳ್ಳುವುದೇ ಬಿಜೆಪಿ ಪಕ್ಷದ ಸಿದ್ಧಾಂತ. ಹಿಂದೂ ಧರ್ಮದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಪಕ್ಷ ಇಂದು ದೇವಸ್ಥಾನಗಳನ್ನು ಕೆಡವುತ್ತಿದೆ. ಬಿಜೆಪಿಯ ಇಬ್ಬಗೆಯ ನೀತಿ ಇದರಿಂದಲೇ ತಿಳಿಯುತ್ತದೆ. ಜನರಿಗೆ ಸುಳ್ಳು ಹೇಳಿ ಮರಳು ಮಾಡುವುದು ಈಗ ಸಾಧ್ಯವಿಲ್ಲ. ಸರಕಾರದ ಬೊಕ್ಕಸ ಕೊಳ್ಳೆ ಹೊಡೆಯುವುದು ಬಿಟ್ಟರೆ ಬಿಜೆಪಿ ಮತ್ತೇನು ಮಾಡಿಲ್ಲ. ಎಲ್ಲದಕ್ಕೂ ಜನರು ಸರಿಯಾದ ಉತ್ತರ ನೀಡಲಿದ್ದಾರೆ ಎಂದರು.
ಪ್ರತಿಭಟನೆಯಲ್ಲಿ ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನ್ ಕುಮಾರ್ ಉಪ್ಪುಂದ, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಸ್. ರಾಜು ಪೂಜಾರಿ, ಕೆಪಿಸಿಸಿ ಸದಸ್ಯ ರಘುರಾಮ ಶೆಟ್ಟಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್, ಬೈಂದೂರು ಯುವ ಕಾಂಗ್ರೆಸ್ ಅಧ್ಯಕ್ಷ ಶೇಖರ ಪೂಜಾರಿ ಉಪ್ಪುಂದ, ಜಿಪಂ ಮಾಜಿ ಸದಸ್ಯೆ ಗೌರಿ ದೇವಾಡಿಗ, ತಾಪಂ ಮಾಜಿ ಸದಸ್ಯರಾದ ಜಗದೀಶ ದೇವಾಡಿಗ, ವಿಜಯ ಶೆಟ್ಟಿ ಸೇರಿದಂತೆ ಹಲವರು ಭಾಗಿಯಾಗಿದ್ದರು.