ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಡಂಪಿಗ್ ಯಾರ್ಡ್‌ನಂತೆ ಭಾಸವಾಗುತ್ತಿದ್ದ ಕೋಟೇಶ್ವರದ ಸರ್ವಿಸ್ ರಸ್ತೆಯ ಅಂಚಿನಲ್ಲಿಗ ಬಣ್ಣ ಬಣ್ಣದ ಗಿಡಗಳು ಕಂಗೊಳಿಸುತ್ತಿವೆ. ಅನಗತ್ಯವಾಗಿ ಕಸ ಎಸೆಯುದನ್ನು ತಡೆಯಲು ಅದೇ ಪ್ರದೇಶದಲ್ಲಿ ಸುಂದರ ಗಾರ್ಡನ್ ನಿರ್ಮಿಸಲಾಗಿದೆ.
ಬೆಳೆಯುತ್ತಿರುವ ಪ್ರಮುಖ ಪಟ್ಟಣ ಪ್ರದೇಶ ಕೋಟೇಶ್ವರಕ್ಕೆ ಕಸ ವಿಲೇವಾರಿ ಬಹುದೊಡ್ಡ ತಲೆನೋವು. ಕೋಟೇಶ್ವರ ಹೆದ್ದಾರಿ, ಸರ್ವಿಸ್ ರಸ್ತೆ ಬದಿ ಕೊಳಚೆ ಗುಂಡಿಗಳಾಗಿ ಗೋಚರಿಸುತ್ತಿವೆ. ಕೋಟೇಶ್ವರದ ಎಂಬ್ಯಾಕ್‌ಮೆಂಟ್ ಸಂಧಿಸುವ ಸರ್ವಿಸ್ ರಸ್ತೆಯ ಅಂಚು ಇತ್ತೀಚಿನ ವರ್ಷಗಳಲ್ಲಿ ತ್ಯಾಜ್ಯ ಗುಂಡಿಯಾಗಿ ಮಾರ್ಪಟ್ಟಿತ್ತು.
ರಸ್ತೆಯಂಚಿನ ಖಾಲಿ ನಿವೇಶನ ಡಂಪಿಂಗ್ ಯಾರ್ಡ್ ಆಗಿದ್ದವು. ದಾರಿಹೋಕರು ಎಸೆದು ಹೋಗುವ ತ್ಯಾಜ್ಯಗಳನ್ನು ಸುಟ್ಟು ಹಾಕುವುದು, ತೆರವುಗೊಳಿಸುವುದು ಪಂಚಾಯಿತಿಗೆ ಪ್ರತ್ಯೇಕ ಹೊರೆ. ಈ ಬಗ್ಗೆ ಯಾವುದೇ ಕ್ರಮ ಕೈಗೊಂಡರೂ ಸಾರ್ವಜನಿಕರು ಸ್ಪಂದಿಸಿರಲಿಲ್ಲ ಇದೆಲ್ಲದಕ್ಕೂ ಈಗ ಬ್ರೇಕ್ ಹಾಕಲು ಸ್ಥಳೀಯಾಡಳಿತ ಕ್ರಮ ಕೈಗೊಂಡಿದೆ.
ಕಸದ ಗುಂಡಿಯಲ್ಲಿ ಹೂತೋಟ:
ಪ್ಲಾಸ್ಟಿಕ್, ಮಾಂಸ ಸಹಿತ ತ್ಯಾಜ್ಯ ಬೀಳುತ್ತಿದ್ದ ಸ್ಥಳದಲ್ಲೀಗ ಹೂಬನ ಕಂಗೊಳಿಸುತ್ತಿದೆ. ಅಲಂಕಾರಿಕ ಗಿಡಗಳು, ಗಾರ್ಡನ್ ಸೊಬಗು ಹೆಚ್ಚಿಸುವ ಆಕೃತಿಗಳು ಗಮನ ಸೆಳೆಯುತ್ತಿವೆ. ಹೆದ್ದಾರಿ ಬದಿಯಲ್ಲಿ ಕಸ ಎಸೆಯುವ ಸ್ಥಳವನ್ನು ಗುರುತಿಸಿ ಅಲ್ಲಿ ಗಾರ್ಡನ್ ರೂಪಿಸಲು ಜಿಪಂ ನೀಡಿದ ನಿರ್ದೇಶನದಂತೆ ಕೋಟೇಶ್ವರ ಪಂಚಾಯಿತಿಯ ತ್ಯಾಜ್ಯ ಎಸೆಯುವ ಜಾಗದಲ್ಲಿ ಸುಂದರ ಗಾರ್ಡನ್ ರೂಪಿಸಲಾಗಿದೆ. ಇದಕ್ಕಾಗಿ ಪಂಚಾಯತ್ 30ಸಾವಿರಕ್ಕೂ ಅಧಿಕ ಹಣ ವ್ಯಯಿಸಿದೆ.